ಬೆಂಗಳೂರು: ಫೆಬ್ರವರಿ ತಿಂಗಳ ಮೊದಲ ದಿನವೇ ಹಾಗೂ ಕೇಂದ್ರ ಬಜೆಟ್ ಮಂಡನೆ ದಿನವೇ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಸಿಲಿಂಡರ್ ದರವನ್ನು ಹೆಚ್ಚಳ ಮಾಡಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳಿಗೆ ಭಾರೀ ಹೊಡೆತ ಕೊಟ್ಟಿದೆ.
ಇಂದಿನಿಂದಲೇ (ಫೆಬ್ರವರಿ 1) ಅನ್ವಯವಾಗುವಂತೆ 19 ಕೆಜಿ ತೂಕದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಏರಿಕೆಯ ನಂತರ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಬೆಲೆ ₹1,814ಕ್ಕೆ ಏರಿಕೆಯಾಗಿದೆ.

ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಹೋಟೆಲ್, ಕ್ಯಾಂಟೀನ್, ರೆಸ್ಟೋರೆಂಟ್‌ಗಳ ನಿರ್ವಹಣಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಇದರ ನೇರ ಪರಿಣಾಮ ಗ್ರಾಹಕರ ಮೇಲೂ ಬೀರುವ ಆತಂಕವಿದ್ದು, ಹೊರಗಿನ ತಿಂಡಿ-ತಿನಿಸು ಹಾಗೂ ಊಟದ ದರಗಳಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಸಂಭವಿಸುವ ಸಾಧ್ಯತೆ ಇದೆ. ಕೇಂದ್ರ ಬಜೆಟ್ ದಿನವೇ ದೇಶದ ವ್ಯಾಪಾರಸ್ಥರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.












