ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ‘ಬಿ ರಿಪೋರ್ಟ್’ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ದುರುದ್ದೇಶಿತ ದೂರು ನೀಡಲಾಗಿದೆ ಎಂದು ಕಂಡುಬಂದ ಕಾರಣ, ದೂರುದಾರೆ ಮಂಜುಳಾ ಪೂಜಾರ್ ಅವರಿಗೆ ₹1 ಲಕ್ಷ ದಂಡ ವಿಧಿಸಲಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದ್ದು, ಸಿಐಡಿ ಸಲ್ಲಿಸಿದ ವರದಿಯನ್ನು ಪರಿಗಣಿಸಿ ಈ ಕ್ರಮ ಕೈಗೊಂಡಿದೆ. ‘ಬಿ ರಿಪೋರ್ಟ್’ ಎಂದರೆ ಪ್ರಕರಣದಲ್ಲಿ ಆರೋಪಗಳಿಗೆ ಸಾಕ್ಷ್ಯಾಧಾರಗಳ ಕೊರತೆ ಅಥವಾ ಆರೋಪ ಅಸತ್ಯವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದನ್ನು ಸೂಚಿಸುತ್ತದೆ.ಈ ಕುರಿತು ಪ್ರತಿಕ್ರಿಯಿಸಿದ ಗುತ್ತಿಗೆದಾರ ಅರ್ಜುನ್ ಗುಡ್ಡದ್, “ನಮ್ಮ ಮೇಲೆ ಹಾಗೂ ವಿನಯ್ ಕುಲಕರ್ಣಿ ಅವರ ಮೇಲೆ ಮಂಜುಳಾ ಪೂಜಾರ್ ಆರೋಪ ಮಾಡಿದ್ದರು. ಅದರ ಆಧಾರದಲ್ಲಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಸಿಐಡಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತು. ಈ ವರದಿಯನ್ನು ದೂರುದಾರೆ ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ. ಇದೀಗ ಕೋರ್ಟ್ ಅವರ ಮೇಲೆಯೇ ದಂಡ ವಿಧಿಸಿದೆ,” ಎಂದು ತಿಳಿಸಿದ್ದಾರೆ.

ಮಂಜುಳಾ ಪೂಜಾರ್ ಅವರು ರೈತ ಹೋರಾಟಗಾರ್ತಿ ಎಂಬ ಹೆಸರಿನಿಂದ ಪರಿಚಿತರಾಗಿದ್ದು, 2024ರ ಅಕ್ಟೋಬರ್ನಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಆದರೆ ತನಿಖೆ ವೇಳೆ ಆ ಆರೋಪಗಳಿಗೆ ಪೂರಕವಾದ ಯಾವುದೇ ದೃಢವಾದ ಸಾಕ್ಷ್ಯಗಳು ಲಭ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಪ್ರಕರಣದ ಮತ್ತೊಂದು ಭಾಗವಾಗಿ, ಆರೋಪಿಗಳ ವಿರುದ್ಧ ಬೆದರಿಕೆ ಆರೋಪಗಳನ್ನೂ ಮಾಡಲಾಗಿತ್ತು. ಆದರೆ ಅವುಗಳಿಗೂ ಸ್ಪಷ್ಟವಾದ ಸಾಕ್ಷ್ಯಾಧಾರಗಳ ಕೊರತೆ ಕಂಡುಬಂದಿದೆ ಎಂದು ಮೂಲಗಳು ಹೇಳುತ್ತಿವೆ.

ಸದ್ಯ ನ್ಯಾಯಾಲಯದ ಆದೇಶದ ಪೂರ್ಣ ಪ್ರತಿಯನ್ನು ಸಂಬಂಧಿತರಿಗೆ ಇನ್ನೂ ಅಧಿಕೃತವಾಗಿ ದೊರೆತಿಲ್ಲ. ಆದಾಗ್ಯೂ, ಈ ತೀರ್ಪು ಪ್ರಕರಣಕ್ಕೆ ಅಂತ್ಯ ಬೀರಬಹುದಾದ ಪ್ರಮುಖ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದೆ.






