ನಟ ರಿಷಬ್ ಶೆಟ್ಟಿಯ(Rishab Shetty) ಮುಂದೆ ಕಾಂತಾರ(Kantara )ಚಾಪ್ಟರ್ 1 ಸಿನಿಮಾವನ್ನು ಹೊಗಳುವ ಭರದಲ್ಲಿ ಅನುಚಿತ ರೀತಿಯಲ್ಲಿ ದೈವದ ಅನುಕರಣೆ ಮಾಡಿದ ಬಾಲಿವುಡ್ ನಟ ರಣವೀರ್ ಸಿಂಗ್ ( Ranveer singh) ಕೊನೆಗೂ ಕ್ಷಮೆಯಾಚಿಸಿದ್ದಾರೆ.

ಇತ್ತೀಚೆಗಷ್ಟೆ ನಡೆದ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಟ ರಣವೀರ್ ಸಿಂಗ್, ಕನ್ನಡ ಚಿತ್ರರಂಗದ ನಟ ರಿಷಬ್ ಶೆಟ್ಟಿ ಹಾಗೂ ಅವರ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ಹೊಗಳುತ್ತಾ ದೈವವನ್ನು ಅಣುಕಿಸಿದ್ದರು. ಅಲ್ಲದೇ ಚಾವುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಣವೀರ್ ಸಿಂಗ್ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ತುಳುನಾಡ ಜನರ ಜೀವಾತ್ಮವಾಗಿರುವ ದೈವವನ್ನು ವೇದಿಕೆ ಮೇಲೆ ನಟರು ಮನಬಂದಂತೆ ಅಣುಸುವ ಸನ್ನಿವೇಶ ನಿರ್ಮಾಣವಾಗಲು ನೀವೇ ಕಾರಣ ಎಂದು ನಟ ರಿಷಬ್ ಶೆಟ್ಟಿಯನ್ನು ಕೂಡ ದೈವ ಭಕ್ತರು ತರಾಟೆಗೆ ತೆಗೆದುಕೊಂಡಿದ್ದರು. ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ರಣವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ.

ʼಅಂದು ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ನನ್ನಿಂದ ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆʼ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಕ್ಷಮೆ ಕೇಳಿದ್ದಾರೆ.












