ನಾವು ಪ್ರದೇಶ ಕಾಂಗ್ರೆಸ್ ಸಮಿತಿಯ ಪುನರ್ ಸಂಘಟನೆಗಾಗಿ ಐದರಿಂದ ಆರು ಜಿಲ್ಲೆಗಳ ಸಭೆಯನ್ನು ಒಟ್ಟಿಗೆ ಮಾಡುತ್ತಿದ್ದೇವೆ. ರಾಜ್ಯದಲ್ಲಿನ ಪ್ರಸ್ತುತ ರಾಜಕೀಯ ಸ್ಥಿತಿ ನೋಡಿದರೆ ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಪೆಗಾಸಸ್ ಕದ್ದಾಲಿಕೆ ಮೂಲಕ ಈ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರ ಸರ್ಕಾರದ ವಿರುದ್ಧ ಕಿಡಿಗಾರಿದ್ದಾರೆ.
ಮೈಸೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೋದಿ ಸರ್ಕಾರ ನಮ್ಮ ಪಕ್ಷದ ನಾಯಕರಾದ ಪರಮೇಶ್ವರ, ಪಕ್ಷದ ರಾಜ್ಯಾಧ್ಯಕ್ಷರ ಆಪ್ತರ, ಮಾಜಿ ಪ್ರಧಾನ ಮಂತ್ರಿಗಳ ಹಾಗೂ ಆಗಿನ ರಾಜ್ಯದ ಮುಖ್ಯಮಂತ್ರಿಗಳ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಿದೆ. ಚುನಾಯಿತ ಸರ್ಕಾರವನ್ನು ಬೀಳಿಸಿ ಬಿಜೆಪಿಯ ಅನೈತಿಕ ಸರ್ಕಾರವನ್ನು ರಚಿಸಲು ಪೆಗಾಸಸ್ ಅನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದು ಯಾಕೆ ಎಂದು ಇಡೀ ರಾಜ್ಯ ಕೇಳುತ್ತಿದೆ. ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದ್ದೇಕೆ ಎಂಬ ಪ್ರಶ್ನೆಗೆ ಯಾರಿಗೂ ಉತ್ತರ ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಿಂದ ರಚನೆಯಾದದ್ದು ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿರುವ ಕಳಂಕಿತರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹಾಗೂ ಆರ್ ಎಸ್ಎಸ್ ಸೂಚನೆ ನೀಡಿದೆ. ಇದೆಲ್ಲವೂ ಈ ಸರ್ಕಾರ ಭ್ರಷ್ಟಾಚಾರ, ಪಕ್ಷಾಂತರ ಹಾಗೂ ಕದ್ದಾಲಿಕೆಯಿಂದ ನಿರ್ಮಾಣವಾಗಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಸರ್ಕಾರದ ಭಾಗ್ಯ ಯೋಜನೆಗಳು ಕಡು ಬಡವರನ್ನು ತಲುಪಿದ್ದವು. ಆದರೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಜನಪರ ಕಾರ್ಯಕ್ರಮ ಜಾರಿಗೆ ತಂದಿಲ್ಲ. ಈ ಸರ್ಕಾರ ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆದು, ಜನರನ್ನು ಮರೆತಿದೆ ರಂದು ಆರೋಪಿಸಿದ್ದಾರೆ.
ಇಂದು ರಾಜ್ಯದ 12 ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿವೆ. ಸುಮಾರು 70 ಸಾವಿರ ಜನರು ನೆಲೆ ಕಳೆದುಕೊಂಡಿದ್ದಾರೆ. 20 ಕ್ಕೂ ಹೆಚ್ಚು ಜನ ಸತ್ತಿದ್ದಾರೆ. 32 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. 1 ಲಕ್ಷ ಹೆಕ್ಟೋರ್ ಗೂ ಅಧಿಕ ಕೃಷಿ ಭೂಮಿ ನಾಶವಾಗಿದೆ. 2019 ರಿಂದ ರಾಜ್ಯದ ಸ್ಥಿತಿ ಇದೇ ಆಗಿದೆ. ಆದರೆ ಮೋದಿ ಬಂದು ವೀಕ್ಷಣೆ ಮಾಡಿದ್ದಾರಾ..? ಇವರಿಗಾಗಿ ಪರಿಹಾರ ಘೋಷಿಸಿದ್ದಾರಾ..? ಇಲ್ಲ ಎಂದಿದ್ದಾರೆ.
ಮೋದಿ ಅವರು ಬಿಹಾರ, ಗುಜರಾತಿಗೆ ಹೋಗುತ್ತಾರೆ. ಅವರು ಭಾರತದ ನಕ್ಷೆಯಲ್ಲಿ ಕರ್ನಾಟಕ ಇಲ್ಲವೆಂಬಂತೆ ನಡೆದುಕೊಳ್ಳುತ್ತಿದ್ದಾರೆ.
ಬಿಜೆಪಿ ನಾಯಕರು ಸಚಿವ ಸ್ಥಾನ ಪಡೆಯಲು ಲಾಬಿ ಮಾಡುತ್ತಿದ್ದಾರೆಯೇ ಹೊರತು, ಯಾರೊಬ್ಬರೂ ನೆರೆ ಪೀಡಿತರ ನೆರವಿಗೆ ಧಾವಿಸಿಲ್ಲ. ಕಳೆದ ಒಂದೂವರೆ ವರ್ಷದಿಂದ ಇದೇ ಪರದಾಟ ಮುಂದುವರಿದಿದೆ. ರಾಜ್ಯದ ಜನ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿ ಸಿಗದೆ ಒದ್ದಾಡುತ್ತಿದ್ದಾರೆ, ಸಾಯುತ್ತಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಈ ಸಮಯದಲ್ಲಿ ಜೆ.ಪಿ. ನಡ್ಡಾ ಅವರಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ, ಅಮಿತ್ ಶಾ ಅವರಾಗಲಿ ಎಲ್ಲಿದ್ದಾರೆ? ಯಡಿಯೂರಪ್ಪ, ಬೊಮ್ಮಾಯಿ ಅವರು ಎಲ್ಲಿದ್ದಾರೆ? ಇವರು ಪದೇ ಪದೆ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಅವರ ಅಧಿಕಾರ ದಾಹ ಕೊನೆಗೊಳ್ಳಬೇಕು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕೆಂದು ಪಣ ತೊಟ್ಟಿದ್ದೇವೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಮಾಧ್ಯಮಗಳು, ಚುನಾವಣಾ ಆಯೋಗ, ನ್ಯಾಯಾಂಗ ವ್ಯವಸ್ಥೆ, ಸಿಬಿಐ, ಇಡಿ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಅವರ ಸಂಪುಟ ಸಚಿವರ ಮೇಲೂ ಗೂಢಚಾರಿಕೆ ನಡೆಸುತ್ತಿದ್ದಾರೆ. ಸಿಬಿಐ ನಿರ್ದೇಶಕರ ಕುಟುಂಬ ಸದಸ್ಯರ ಮೇಲೆ ಗೂಢಚಾರಿಕೆ ನಡೆಸಿದ್ದಾರೆ ಎಂದಿದ್ದಾರೆ.
ಗೋವಾ, ಮಧ್ಯಪ್ರದೇಶ್, ಮಣಿಪುರ ಸೇರಿದಂತೆ ಎಲ್ಲೆಡೆ ಬಿಜೆಪಿ ಸರ್ಕಾರ ಗೂಢಚಾರಿಕೆ ನಡೆಸುತ್ತಿದೆ. ಇದರ ವಿರರುದ್ಧ ನಿಲ್ಲುವುದು ನಮ್ಮ ಕರ್ತವ್ಯ.
ನಾವು ಯಡಿಯೂರಪ್ಪ ಅವರ ರಾಜೀನಾಮೆಯನ್ನು ಲಾಭ ಅಥವಾ ನಷ್ಟದ ದೃಷ್ಟಿಕೋನದಲ್ಲಿ ನೋಡುವುದಿಲ್ಲ. ಯಡಿಯೂರಪ್ಪ ಅವರು ಅತ್ಯಂತ ಭ್ರಷ್ಟ ಸರ್ಕಾರ ಹಾಗೂ ದುರಾಡಳಿತ ನಡೆಸುತ್ತಿದ್ದರು ಎಂಬುದು ಸತ್ಯ. ತಮ್ಮದೇ ನಾಯಕರನ್ನು ಅಪಮಾನಿಸುವುದರಲ್ಲಿ ಮೋದಿ ಹಾಗೂ ಅಮಿತ್ ಶಾ ನಿಪುಣರು. ಇದೇ ಮೊದಲ ಬಾರಿಗೇನೂ ಈ ರೀತಿ ಆಗಿಲ್ಲ. ಮೋದಿ ಅವರ ಗುರು ಆಡ್ವಾಣಿ ಅವರನ್ನು ಯಾವ ರೀತಿ ಬಳಸಿಕೊಂಡು ಮೂಲೆಗುಂಪು ಮಾಡಿದ್ದಾರೆ, ಮುರಳಿ ಮನೋಹರ ಜೋಷಿ, ಕೇಶುಭಾಯ್ ಪಟೇಲ್ ಅವರನ್ನು ಹೇಗೆ ಮುಗಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಯಾರಾದರೂ ತಮ್ಮ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತಾರಾ? ಅಂತಹವರನ್ನು ನಮ್ಮ ಸಂಸ್ಕೃತಿಯಲ್ಲಿ ಏನೆಂದು ಕರೆಯುತ್ತಾರೆ ನೀವೇ ಯೋಚಿಸಿ. ಅದೇ ರೀತಿ ಮೋದಿ ಅವರು ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಶುಭಾಯಿ ಪಟೇಲ್, ಹಿರೇನ್ ಪಾಂಡ್ಯ, ಯಶ್ವಂತ್ ಸಿನ್ಹಾ, ಜಗಮೋಹನ್, ಶಾಂತ ಕುಮಾರ್ ಅವರಿಗೆ ಮಾಡಿದ್ದನ್ನೇ ಯಡಿಯೂರಪ್ಪ ಅವರಿಗೂ ಮಾಡಿದ್ದಾರೆ. ಇದು ಅವರ ಆಂತರಿಕ ವಿಚಾರವಾಗಿದ್ದು, ಈ ಬಗ್ಗೆ ನಾವು ಹೆಚ್ಚಿನದೇನನ್ನೂ ಹೇಳುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯವನ್ನು ತಲುಪಲು ಪ್ರಯತ್ನಿಸುತ್ತದೆ. ಲಿಂಗಾಯತ ಸಮುದಾಯದ ಪ್ರೀತಿ ವಿಶ್ವಾಸ, ಒಕ್ಕಲಿಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದಲಿತ ಸಮುದಾಯದವರ ಪ್ರೀತಿ ವಿಶ್ವಾಸವೂ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯ. ನಾನು ಮೇಲ್ವರ್ಗದ ಸಮುದಾಯಕ್ಕೆ ಸೇರಿದವನಾದರೂ ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಕ್ಕೆ ಸೇರಿದ ನನ್ನ ಸ್ನೇಹಿತ ಕೂಡ ನನ್ನೊಟ್ಟಿಗೆ ಕೂರಬೇಕು ಎಂದು ಬಯಸುತ್ತೇನೆ. ಅದೇ ನಮ್ಮ ಭಾರತದ, ಸಂವಿಧಾನದ, ಪ್ರಜಾಪ್ರಭುತ್ವದ ಉದ್ದೇಶ ಎಂದಿದ್ದಾರೆ.
ತಮಗೆ ಬೇಕಾದಾಗ ಬಳಸಿಕೊಂಡು ಬೇಡವಾದಾಗ ಎಸೆಯುವುದೇ ಬಿಜೆಪಿ ಸಂಸ್ಕೃತಿ. ಅದೇ ರೀತಿ ಅನೇಕ ಸಮುದಾಯಗಳನ್ನು ಹಾಗೂ ಅದರ ನಾಯಕರನ್ನು ಬಿಜೆಪಿ ಬಳಸಿಕೊಂಡು ನಂತರ ಬಿಸಾಕಿದೆ. ಆದರೆ ಕಾಂಗ್ರೆಸ್ ಯಾವುದೇ ಸಮುದಾಯಕ್ಕಾಗಲಿ, ವ್ಯಕ್ತಿಗಾಗಲಿ ಆ ರೀತಿ ಮಾಡುವುದಿಲ್ಲ. ಎಲ್ಲ ಹಿರಿಯ ನಾಯಕರು, ಸಮುದಾಯದವರು, ಧರ್ಮಗಳನ್ನು ನಾವು ಗೌರವಿಸುತ್ತೇವೆ. ಅವರ ಆಶೀರ್ವಾದ ಪಡೆಯುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಕ್ಷದ ಪ್ರಣಾಳಿಕೆ ನೋಡಿದರೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಗೆ ತೊಂದರೆಯಾಗದಂತೆ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡುವುದಾಗಿ ಹೇಳಿದ್ದೆವು. ರಾಹುಲ್ ಗಾಂಧಿ ಅವರು ಪ್ರಧಾನಿಯಾದ ದಿನ ಇದನ್ನು ಸಂವಿಧಾನ ವ್ಯಾಪ್ತಿಯಲ್ಲಿ ಜಾರಿಗೆ ತರುತ್ತೇವೆ ಎಂದಿದ್ದಾರೆ.