ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಮೇರೆಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಪಕ್ಷದ ಸಂಘಟನೆ ಕುರಿತು 6 ಕಡೆ ದೊಡ್ಡ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಮ್ಮ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯ ಬಗ್ಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ದಿಲ್ಲಿಗೆ ಹೋಗಿ ಭೇಟಿಯಾಗಿ ಬಂದಿದ್ದಾರೆ ಎಂದರು.
ಹೈಕಮಾಂಡ್ ಜೊತೆ ಮಾತುಕತೆ, ಸೂಚನೆಯ ಬಗ್ಗೆ ವಿವರವಾಗಿ ಚರ್ಚೆ ಮಾಡಿದ್ದೇವೆ. ನಮ್ಮ ಪ್ರಧಾನಮಂತ್ರಿ ಗಳು ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅವರು ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮಾಡಬೇಕಿರುವ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ವಾಗಿ ಚರ್ಚೆ ಮಾಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್ ಅವರು ವಿವಿಧ ತಂಡಗಳಲ್ಲಿ ಪ್ರವಾಸ ಮಾಡುವ ಬಗ್ಗೆ ಚರ್ಚೆಯಾಗಿದೆ. ಬರುವ ದಿನಗಳಲ್ಲಿ ಇನ್ನೊಂದು ಸಭೆಯನ್ನು ರಾಜ್ಯ ಮಟ್ಟದ ಹಿರಿಯ ನಾಯಕರೊಂದಿಗೆ ನಡೆಸಿ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಕಾರ್ಯಕ್ರಮದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಣಯವಾಗಿದೆ ಎಂದು ಅವರು ಹೇಳಿದರು.
ಸೆಪ್ಟೆಂಬರ್ 8 ರಂದು ದೊಡ್ಡ ಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದನ್ನು ಯಶಸ್ವಿ ಮಾಡಲು ಕೆಲವು ಸೂಚನೆ ಗಳನ್ನು ನೀಡಿದ್ದಾರೆ. ಅದನ್ನು ಕಾರ್ಯಗತ ಮಾಡಲು ಸಂಘಟಕರಿಗೆ ತಿಳಿಸಲಾಗಿದೆ. ಸಚಿವ ಡಾ: ಸುಧಾಕರ್, ಶಾಸಕರು, ಪದಾಧಿಕಾರಿಗಳು ಎಲ್ಲರೂ ಸೇರಿ ಜನೋತ್ಸವ ಯಶಸ್ವಿ ಮಾಡುತ್ತೇವೆ ಎಂದರು.