ಬೆಂಗಳೂರು (Bengaluru) : ನಾಳೆ ರಾಜ್ಯಸಭೆ ಚುನಾವಣೆ (Rajyasabha Election) ನಡೆಯಲಿದೆ. ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ ಇರುವುದರಿಂದ ಕಾಂಗ್ರೆಸ್ ನ ಎಲ್ಲ ಶಾಸಕರನ್ನು ಇಂದು ಹೋಟೆಲ್ ಗೆ ಕರೆದೊಯ್ಯಲಾಗುತ್ತಿದೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಕಾಂಗ್ರೆಸ್ ಶಾಸಕರು ಹೋಟೆಲ್ ನಿಂದಲೇ ಮತದಾನಕ್ಕೆ ಬರಲಿದ್ದಾರೆ.
ಕೋರಮಂಗಲದ ಎಂಬೆಸಿ ಗಾಲ್ಫ್ ಲಿಂಕ್ಸ್ ಬ್ಯುಸಿನೆಸ್ ಪಾರ್ಕ್ ನಲ್ಲಿರುವ ಹಿಲ್ಟನ್ ಹೋಟೆಲ್ ನಲ್ಲಿ ಕಾಂಗ್ರೆಸ್ ನ ಎಲ್ಲ ಶಾಸಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಶಾಸಕರನ್ನು ಹೋಟೆಲ್ ಗೆ ಕರೆತರುವ ಜವಾಬ್ದಾರಿಯನ್ನು ಬೈರತಿ ಸುರೇಶ್ (Byrathi Suresh), ಕೃಷ್ಣ ಬೈರೇಗೌಡ (Krishna Byre Gowda) ಸೇರಿದಂತೆ ಕೆಲವು ಸಚಿವರಿಗೆ ವಹಿಸಲಾಗಿದೆ.
ಕಾಂಗ್ರೆಸ್ ನ (Congress) ಮೂವರು ಮತ್ತು ಎನ್ ಡಿಎ (NDA) ಮೈತ್ರಿಕೂಟದ ಇಬ್ಬರು ಕಣದಲ್ಲಿದ್ದಾರೆ. ಮೂರು ಸ್ಥಾನ ಗೆಲ್ಲುವ ಅವಕಾಶ ಕಾಂಗ್ರೆಸ್ ಗೆ ಇದ್ದರೂ ಎನ್ ಡಿಎ ಮೈತ್ರಿಕೂಟವು ಮತಗಳ ಕೊರತೆಯ ಮಧ್ಯೆಯೂ ಡಿ.ಕುಪೇಂದ್ರ ರೆಡ್ಡಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಇದರಿಂದಾಗಿ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಯಾವ ಶಾಸಕರು ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಅಲ್ಲಿ ಅಖೈರುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿರುವ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್ ಮತ್ತು ಜಿ.ಸಿ.ಚಂದ್ರಶೇಖರ್ ಕೂಡ ಸಭೆಯಲ್ಲಿ ಪಾಲ್ಗೊಳ್ಳುವರು. ಪ್ರತಿ ಶಾಸಕರಿಗೂ ಪ್ರಾಶಸ್ತ್ಯದ ಮತಗಳ ಹಂಚಿಕೆ ಪಟ್ಟಿಯನ್ನು ನೀಡಲು ತಯಾರಿ ನಡೆದಿದೆ.
#Karnataka #bengaluru #rajyasabhaelection #congress #NDA