500 ಮೆಗಾವ್ಯಾಟ್ ಪವನ (Wind Power) ವಿದ್ಯುತ್ ಯೋಜನೆಯನ್ನು ನೇರವಾಗಿ ಅದಾನಿ ಗ್ರೂಪ್‌ಗೆ ನೀಡುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಹೇಳಿದ್ದರು ಎಂದು ಶ್ರೀಲಂಕಾದ ವಿದ್ಯುತ್ ಪ್ರಾಧಿಕಾರದ ಮುಖ್ಯಸ್ಥ ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಪಕ್ಸೆ, ಯಾವುದೇ ನಿರ್ದಿಷ್ಟ ಸಂಸ್ಥೆಗೆ ಯೋಜನೆಯನ್ನು ನೀಡುವಂತೆ ತಾನು ಕೇಳಿರುವುದನ್ನು ನಿರಾಕರಿಸಿದ್ದಾರೆ.
ಅದಾಗ್ಯೂ, ತನ್ನ ಗಂಭೀರ ಆರೋಪದ ಎರಡು ದಿನಗಳ ಬಳಿಕ, ತನ್ನ ಹೇಳಿಕೆಯನ್ನು ಹಿಂಪಡೆದ ಶ್ರೀಲಂಕಾ ವಿದ್ಯುತ್ ಪ್ರಾಧಿಕಾರದ ಮುಖ್ಯಸ್ಥ ತಾನು ಭಾವನಾತ್ಮಕ ಒತ್ತಡದಲ್ಲಿದ್ದೆ, ನಾನು ಆ ಬಗ್ಗೆ ಸುಳ್ಳು ಹೇಳಿದ್ದೇನೆ ಎಂದು ಹೇಳಿ, ತಮ್ಮ ಹಿಂದಿನ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ (ಸಿಇಬಿ) ಅಧ್ಯಕ್ಷ ಎಂಎಂಸಿ ಫರ್ಡಿನಾಂಡೋ ಅವರು ಅದಾನಿ ಗ್ರೂಪ್‌ಗೆ 500 ಮೆಗಾವ್ಯಾಟ್ ಪವನ ವಿದ್ಯುತ್ ಸ್ಥಾವರವನ್ನು ಭಾರತದ ಪ್ರಧಾನಿ ಒತ್ತಾಯಿಸುತ್ತಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷರು ಹೇಳಿದ್ದಾರೆ ಎಂದು ಈ ವಾರದ ಆರಂಭದಲ್ಲಿ ಸಂಸದೀಯ ಸಮಿತಿಯ ಮುಂದೆ ಹೇಳಿಕೆ ನೀಡಿದ್ದರು.
ಶ್ರೀಲಂಕಾದ ಸುದ್ದಿವಾಹಿನಿ ನ್ಯೂಸ್ ಫಸ್ಟ್ ಅಪ್‌ಲೋಡ್ ಮಾಡಿದ ಅವರ ಸಾಕ್ಷ್ಯದ ವೀಡಿಯೊ ಕ್ಲಿಪ್ ಪ್ರಕಾರ, ಫರ್ಡಿನಾಂಡೋ ಅವರು 24 ನವೆಂಬರ್ 2021 ರಂದು, ಸಭೆಯ ನಂತರ ಅಧ್ಯಕ್ಷರು (ಗೋತಬಯ ರಾಜಪಕ್ಸ) ನನ್ನನ್ನು ಕರೆದರು ಮತ್ತು ಯೋಜನೆಯನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವಂತೆ ಭಾರತದ ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು ಎಂದು ಸಮಿತಿಯ ಮುಂದೆ ತಿಳಿಸಿದ್ದರು. ಶ್ರೀಲಂಕಾದ ಉತ್ತರ ಕರಾವಳಿಯಲ್ಲಿ 500 ಮೆಗಾವ್ಯಾಟ್ ಪವನ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಅದಾನಿ ಸಮೂಹವನ್ನು ಹೇಗೆ ಆಯ್ಕೆ ಮಾಡಲಾಯಿತು ಎಂಬುದರ ಕುರಿತು ಸಮಿತಿಯ ಎತ್ತಲಾಗಿದ್ದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದರು.
ಶ್ರೀಲಂಕಾದ ಸುದ್ದಿ ಸಂಸ್ಥೆ ನ್ಯೂಸ್ ಫಸ್ಟ್ ವರದಿ ಮಾಡಿದ ಪ್ರಕಾರ, ಫರ್ಡಿನಾಂಡೋ ಅವರು, ಇದು ವಿದ್ಯುತ್ ಪ್ರಾಧಿಕಾರ ಅಥವಾ ತನಗೆ ಸಂಬಂಧಿಸಿದ ವಿಷಯವಲ್ಲ, ಹೂಡಿಕೆ ಮಂಡಳಿಗೆ ಇದನ್ನು ತಿಳಿಸಬೇಕು ಎಂದು ಅಧ್ಯಕ್ಷ ಗೋತಬಯ ಅವರಿಗೆ ತಿಳಿಸಿದ್ದಾರೆ. ಬಳಿಕ, ಸ್ವತಃ ಫರ್ಡಿನಾಂಡೋ ಅವರೇ ಈ ವಿಷಯವನ್ನು ಪರಿಶೀಲಿಸುವಂತೆ ಲಿಖಿತವಾಗಿ ಖಜಾನೆ ಕಾರ್ಯದರ್ಶಿ ಗಮನಕ್ಕೆ ತಂದಿದ್ದಾರೆ. ಇದು ʼಸರ್ಕಾರದಿಂದ ಸರ್ಕಾರದೊಡನೆʼ ನಡೆಯುವ ಒಪ್ಪಂದವಾಗಿದೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅದಾನಿ ಹಾಗೂ ಅಂಬಾನಿಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಶ್ರೀಲಂಕಾ ಸಂಸ್ಥೆಯ ಅಧಿಕಾರಿ ನೀಡಿದ್ದ ಹೇಳಿಕೆಯು ಗಂಭೀರ ಗಮನವನ್ನು ಪಡೆದುಕೊಂಡಿತ್ತು. ಆದರೆ, ಅದರ ಬೆನ್ನಲ್ಲೇ ತಾನು ಸುಳ್ಳು ಹೇಳಿದ್ದೇನೆಂದು ಅವರು ಹೇಳಿರುವುದು ಸಾಕಷ್ಟು ಗುಮಾನಿಗೆ ಕಾರಣವಾಗಿದೆ.