ಮೈಸೂರು: ನಾಡಹಬ್ಬ ಮೈಸೂರು ದಸರಾ ಆಚರಣೆಯ ವೇಳೆ ವಿವಿಧ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಪೊಲೀಸ್ ಇಲಾಖೆಯ ನಡೆ ಹಾಗೂ ಚಿನ್ನದ ಅಂಬಾರಿಯ ಭದ್ರತೆ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿರುವ ಅವರು, ದಸರಾ ಆಚರಣೆಯ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳನ್ನು ಉಲ್ಲೇಖಿಸಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದಾರೆ.
ದಸರಾ ಕಾರ್ಯಕ್ರಮಗಳ ಆಯೋಜನೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಂಡುಬಂದಿದೆ. ತಮ್ಮ ಕುಟುಂಬದ ಸಹಕಾರವನ್ನು ಸರ್ಕಾರ ಸಾಮಾನ್ಯ ಸಂಗತಿಯೆಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುತ್ತಿರುವುದು ನಿರಾಸೆ ಮೂಡಿಸಿದೆ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಟ್ಟಿಕಾಳಗ ರದ್ದತಿ ಕುರಿತು ಆಕ್ಷೇಪ
ವಜ್ರಮುಷ್ಠಿ ಕಾಳಗದ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆಯೂ ಪ್ರಮೋದಾದೇವಿ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಟ್ಟಿಕಾಳಗ ಇದೇ ಮೊದಲ ಬಾರಿಗೆ ನಿಂತಿದೆ ಎಂಬ ವಾದ ಸರಿಯಲ್ಲ. 1970, 1980 ಮತ್ತು 2020ರಲ್ಲಿಯೂ ಕಾಳಗ ನಡೆದಿರಲಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.ವಜ್ರಮುಷ್ಠಿ ಕಾಳಗವನ್ನು ದಸರಾ ಆಚರಣೆಯ ಭಾಗವಾಗಿ ನಡೆಸುವುದಿಲ್ಲ ಹಾಗೂ ಅದಕ್ಕೆ ಧಾರ್ಮಿಕ ಮಹತ್ವವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ವಿಜಯಯಾತ್ರೆ ನಿಗದಿತ ಮುಹೂರ್ತದಂತೆ ನಡೆದಿದೆ ಎಂದಿದ್ದಾರೆ. ಜೆಟ್ಟಿ ಸಮುದಾಯ ಮತ್ತು ಪೊಲೀಸರ ನಡುವಿನ ಸಮನ್ವಯದ ಕೊರತೆಯಿಂದ ಕಾಳಗ ರದ್ದಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಚಿನ್ನದ ಅಂಬಾರಿ ಭದ್ರತೆ ಬಗ್ಗೆ ಅಸಮಾಧಾನ
ಚಿನ್ನದ ಅಂಬಾರಿಯ ಭದ್ರತೆ ವಿಚಾರದಲ್ಲಿಯೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಬಗ್ಗೆ ರಾಜಮಾತೆ ಪ್ರಶ್ನೆ ಎತ್ತಿದ್ದಾರೆ. ಪೊಲೀಸ್ ಆಯುಕ್ತರು ನೀಡಿದ್ದ ಭರವಸೆಯ ಮೇರೆಗೆ ಅಂಬಾರಿಯನ್ನು ಒದಗಿಸಲಾಗಿತ್ತು. ಆದರೆ, ಆ ಭರವಸೆಯನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.ಅಂಬಾರಿಯ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿಯ ಬಳಿ ಇದ್ದರು. ಇದರಿಂದ ಅಂಬಾರಿಯ ಭದ್ರತೆಗೆ ಧಕ್ಕೆ ಉಂಟಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿನ್ನದ ಅಂಬಾರಿ ತಮ್ಮ ಕುಟುಂಬದ ಖಾಸಗಿ ಆಸ್ತಿಯಾಗಿದ್ದು, ಅದರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಆರೋಪ
ದಸರಾ ಸಂದರ್ಭದಲ್ಲಿ ತಮ್ಮ ಅತಿಥಿಗಳಿಗಾಗಿ ಮೀಸಲಿಟ್ಟಿದ್ದ ಖಾಸಗಿ ಸ್ಥಳವನ್ನು ಅತಿಕ್ರಮಿಸಲಾಗಿತ್ತು. ಅನಧಿಕೃತವಾಗಿ ತಡೆಬೇಲಿ ಹಾಕುವ ಮೂಲಕ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಉಂಟುಮಾಡಲಾಗಿದೆ ಎಂದು ರಾಜಮಾತೆ ಆರೋಪಿಸಿದ್ದಾರೆ. ಈ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನವರಾತ್ರಿ ಆಚರಣೆಯ ವೇಳೆ ತಮ್ಮ ಕುಟುಂಬದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯಾಗಿರುವುದು ಬೇಸರ ತಂದಿದೆ ಎಂದು ಹೇಳಿರುವ ಅವರು, ಸರ್ಕಾರಿ ಕಾರ್ಯಕ್ರಮಗಳ ಆಯೋಜನೆಗೆ ತಮ್ಮ ಕುಟುಂಬದ ಆಚರಣೆಗಳಿಗೆ ಧಕ್ಕೆಯಾಗಬಾರದು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ
ತಮ್ಮ ಧಾರ್ಮಿಕ ಆಚರಣೆಗಳಿಗೆ ಸರ್ಕಾರಿ ಅಧಿಕಾರಿಗಳಿಂದ ಅಡ್ಡಿಯಾಗುತ್ತಿರುವುದನ್ನು ಸಹಿಸುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ. ಈ ವಿಚಾರದಲ್ಲಿ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ತಮಗೆ ಸ್ವಾತಂತ್ರ್ಯವಿದೆ. ನ್ಯಾಯಾಲಯ ಈಗಾಗಲೇ ಸ್ಪಷ್ಟ ಆದೇಶ ನೀಡಿದ್ದರೂ, ಪ್ರತಿ ವರ್ಷವೂ ಕಾನೂನು ಕ್ರಮಕ್ಕೆ ಮುಂದಾಗದೆ ದೂರ ಉಳಿದಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದಸರಾ ಮೊದಲ ದಿನದಿಂದ ಏಳನೇ ದಿನದವರೆಗೆ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ, ಆಯುಧಪೂಜೆ ಮತ್ತು ವಿಜಯದಶಮಿಯಂದು ತಮ್ಮ ಕುಟುಂಬದ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಂಬಾರಿ ಹೊರುವ ಆನೆಯ ಮಾಹಿತಿ ನೀಡಲಿಲ್ಲವೇ?
ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ಮತ್ತು ಅದರ ಕುರಿತ ಮಾಹಿತಿ ಹಂಚಿಕೆಯಲ್ಲಿ ಗೌಪ್ಯತೆ ಕಾಪಾಡಲಾಗಿದೆ ಎಂಬ ವಿಚಾರವೂ ರಾಜಮಾತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದ್ದಾರೆ.ಕಾರ್ಯಕ್ರಮಕ್ಕೆ ಕೇವಲ ಐದು ದಿನಗಳು ಬಾಕಿ ಇರುವಾಗ ಮಾಹಿತಿ ನೀಡಲಾಗಿತ್ತು. ಕೊನೆಯ ಕ್ಷಣದವರೆಗೂ ಯಾವ ಆನೆ ಅಂಬಾರಿ ಹೊರಲಿದೆ ಎಂಬ ವಿವರ ತಿಳಿದಿರಲಿಲ್ಲ. ಈ ಬಗ್ಗೆ ತಾವೇ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಅವರನ್ನು ವಿಚಾರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ದಸರಾ ಆಚರಣೆಗೆ ತಮ್ಮ ಕುಟುಂಬ ಸಹಕಾರ ನೀಡುತ್ತಿದ್ದರೂ, ಈ ಬಾರಿ ಸೂಕ್ತ ಮಾಹಿತಿ ನೀಡದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ಸರ್ಕಾರಕ್ಕೆ ಸಲಹೆಗಳನ್ನು ಪರಿಗಣಿಸುವಂತೆ ಒತ್ತಾಯ
ದಸರಾ ಆಚರಣೆಗೆ ತಮ್ಮ ಕುಟುಂಬ ನೀಡುತ್ತಿರುವ ಸಹಕಾರವನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಪ್ರಮೋದಾದೇವಿ ಒಡೆಯರ್ ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಸಲಹೆಗಳಿಗೆ ಮನ್ನಣೆ ನೀಡಬೇಕು ಹಾಗೂ ದಸರಾ ಆಚರಣೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿದ್ದಾರೆ. ಮೈಸೂರು ದಸರಾ ಆಚರಣೆಯ ವೇಳೆ ಅಧಿಕಾರಿಗಳ ಸಮನ್ವಯ, ಚಿನ್ನದ ಅಂಬಾರಿಯ ಭದ್ರತೆ, ಜಟ್ಟಿಕಾಳಗದ ರದ್ದತಿ ಮತ್ತು ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನ ಹೊಸ ಚರ್ಚೆಗೆ ಕಾರಣವಾಗಿದೆ.






