ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.ಬೆಂಗಳೂರು, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ, ಬೆಳಗಾವಿ ಸೇರಿದಂತೆ 12 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ರಾಜಧಾನಿ ಬೆಂಗಳೂರು ಜನರ ಜೀವನ ಹೈರಾಣಾಗಿದೆ. ಬೆಳಿಗ್ಗೆ ಶಾಲಾ-ಕಾಲೇಜುಗಳಿಗೆ ಕೆಲಸಕ್ಕೆ ಹೋಗಲಾರದೇ ಜನ ಪರಿತಪಿಸುವಂತಾಗಿತ್ತು.
ಬೆಳ್ಳಂಬೆಳಿಗ್ಗೆ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ನಲ್ಲಿ ಜನ ಸಿಲುಕಿ ತೊಂದರೆ ಅನುಭವಿಸುವಂತಾಯಿತು. ನಿನ್ನೆ ತಡರಾತ್ರಿಯಲ್ಲೂ ಕೂಡ ಮಳೆ ಸುರಿದು ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು. ಓಕಳಿಪುರ ಅಂಡರ್‌ಪಾಸ್‌ನಲ್ಲಿ ಮಳೆಗೆ ಕೆರೆಯಂತಾಗಿ ವಾಹನಗಳು ಸಂಚರಿಸಲಾಗದೇ, ಸವಾರರು ಸಂಕಟ ಅನುಭವಿಸಿದರು. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಚ್ಚು ಹಿಡಿದು ಮಳೆ ಸುರಿದಿದ್ದರಿಂದ ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು, ಡ್ಯೂಟಿಗೆ ಹೋಗಲು ನೌಕರರು ಸೇರಿದಂತೆ ಎಲ್ಲರೂ ತೊಂದರೆ ಅನುಭವಸಬೇಕಾಯಿತು.
ಗೊರಗುಂಟೆಪಾಳ್ಯ, ಹೆಸರುಘಟ್ಟ ರಸ್ತೆ, ಓಕಳಿಪುರಂ, ಕೆ.ಆರ್.ವೃತ್ತ, ಏರ್‌ಪೋರ್ಟ್ ರಸ್ತೆ, ಹೆಬ್ಬಾಳ ವೃತ್ತ, ಚಾಲುಕ್ಯ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಆರ್.ಆರ್.ನಗರ, ಉತ್ತರಹಳ್ಳಿ, ಯಲಹಂಕ ಹಲವೆಡೆ ರಸ್ತೆಯಲ್ಲಿ ನೀರು ನಿಂತು, ಟ್ರಾಫಿಕ್ ಜಾಮ್ ಉಂಟಾಗಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದರಿಂದ ಸವಾರರು ಹೈರಾಣಾಗಿದ್ದರು.
ತುಮಕೂರಿನಲ್ಲೂ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿತ್ತು. ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಮಳೆ ಬರುತ್ತಿರುವುದರಿಂದ ಜನ ಹೈರಾಣಾಗಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಮಳೆ ಮುಂದುವರೆದಿದ್ದು, ಹಲವೆಡೆ ಮಳೆಗೆ ಜನರು ತೊಂದರೆಗೆ ಸಿಲುಕಿದರು.