ಬೆಂಗಳೂರು: ರಾಜ್ಯದ ಜನರು ಇಲ್ಲಿಯವರೆಗೆ ಬಿಸಿಲಿನ ಬೇಗೆಗೆ ಬಸವಳಿದು ಹೋಗಿದ್ದರು. ಕಳೆದ ಕೆಲವು ದಿನಗಳಿಂದ ಮಳೆರಾಯ ಎಂಟ್ರಿ ಕೊಟ್ಟಿದ್ದು, ಅವಾಂತರಗಳು ಕೂಡ ಸೃಷ್ಟಿಯಾಗುತ್ತಿವೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು- ಸಿಡಿಲಿನ ಮಳೆಯಾಗುತ್ತಿದೆ. ಹೀಗಾಗಿ ಸಾಕಷ್ಟು ಅವಾಂತರಗಳು ಕೂಡ ಸೃಷ್ಟಿಯಾಗಿವೆ. ಆದರೆ, ರೈತರು ಮಾತ್ರ ಸಂತಸವಾಗಿದ್ದಾರೆ.
ಬೀದರ್ ಜಿಲ್ಲೆಯ ನಿಟ್ಟೂರು (ಬಿ) ಗ್ರಾಮದಲ್ಲಿ ತಾಯಿಯ ಎದುರೇ ಮಗ ಸಿಡಿಲಿಗೆ ಬಲಿಯಾಗಿದ್ದಾನೆ. ಸುನೀಲ್ ವಿಜಯಕುಮಾರ್ ಮಗರೆ (32) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಯುವಕನ ಪಕ್ಕದಲ್ಲಿಯೇ ತಾಯಿ, ಅಣ್ಣ, ಚಿಕ್ಕಪ್ಪ ಇದ್ದರು. ಅದೃಷ್ಟವಶಾತ್ ಅವರೆಲ್ಲ ಸಿಡಿಲಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಚಂದ್ರಕಾಂತ್ ಭಜಂತ್ರಿ (12) ಜಮೀನಿನಿಂದ ಮನೆಗೆ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿದ್ದಾನೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಶ್ರೀನಿವಾಸ ಗೊಲ್ಲರ (16) ಕುರಿ ಮೇಯಿಸುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ. ಇರಕಲ್‍ಗಡದಲ್ಲಿ ಎತ್ತು ಹಾಗೂ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ.
ಚಿಕ್ಕಮಗಳೂರಿನ ಲಿಂಗದಹಳ್ಳಿಯಲ್ಲಿ, ಕಾರಿನ ಮೇಲೆ ತೆಂಗಿನಮರ ಹಾಗೂ ವಿದ್ಯುತ್ ಕಂಬ ಬಿದ್ದು, ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಲವೆಡೆ ಮಳೆಗೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.