ಕಳೆದ ತಿಂಗಳು ಧಾರಕಾರವಾಗಿ ಸುರಿದ ವರುಣ, ರಾಜ್ಯದ ಸಾಕಷ್ಟು ಕಡೆಗಳಲ್ಲಿ ಬಹಳಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದ್ದ. ಈಗ ಇನ್ನೇನು ಮಳೆರಾಯ ಸ್ವಲ್ಪ ಬ್ರೇಕ್ ಕೊಟ್ಟ ಸುಧಾರಿಸಿಕೊಳ್ಳೋಣ ಎನ್ನುವಷ್ಟರಲ್ಲಿ, ಮತ್ತೆ ರಾಜ್ಯದಲ್ಲಿ ಎರಡು ದಿನ ಮಳೆಯಾಗುವ ಸೂಚನೆ ಸಿಕ್ಕಿದೆ.
ಬಂಗಾಳ ಕೊಲ್ಲಿಯಲ್ಲಿ (Bay of Bengal) ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka weather forecast) ಎಚ್ಚರಿಕೆ ನೀಡಿದೆ.
ಹೀಗಾಗಿ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಕೂಡ ಆಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಹಾಸನ, ಕೋಲಾರ,ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ರಾಮನಗರ ಹಾಗೂ ಮೈಸೂರು, ಕೊಡಗು, ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ.