ಬೆವರು ಸುರಿಸಿ ದುಡಿದು ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತ ಈಗ ಕಣ್ಣೀರು ಹಾಕುತ್ತಿದ್ದಾನೆ. ಇತ್ತೀಚೆಗೆ ಎಡಬಿಡದೆ ಸುರಿದ ಭಾರೀ ಮಳೆಗೆ ಗದಗ ಜಿಲ್ಲೆಯ ರೈತರ ಬದುಕೀಗ ಸಂಕಷ್ಟದಲ್ಲಿದೆ. ನೂರಾರು ಕನಸು ಕಟ್ಟಿಕೊಂಡು ಬೆಳೆದಿದ್ದ ಕಡಲೆ ಬೆಳೆ, ಭಾರೀ ಮಳೆಯಿಂದಾಗಿ ರೈತರಿಗೆ ಕಣ್ಣೀರು ಹಾಕಿಸಿದೆ.
ಈ ವರ್ಷ ರಾಜ್ಯದಲ್ಲಿ ರೈತರ ಬದುಕು ದೇವರಿಗೆ ಪ್ರೀತಿ ಎಂಬಂತಾಗಿದೆ. ಮಳೆ ಬಂದರೂ ಕಷ್ಟ, ಬಾರದೇ ಇದ್ದರೂ ಕಷ್ಟ ಎನ್ನುವಂತ ಪರಿಸ್ಥಿತಿ. ಗದಗದ ಹಲವು ತಾಲೂಕುಗಳಲ್ಲಿ ಸುರಿದ ಭಾರೀ ಮಳೆಗೆ, ಕಡಲೆ ಗಿಡಗಳು ಜಮೀನಿನಲ್ಲೇ ಕೊಳೆಯುತ್ತಿದೆ. ಅತಿಯಾದ ಮಳೆಗೆ ಭೂಮಿ ಹಸಿಯಾಗಿದ್ದಕ್ಕೆ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಕಡಲೆ ಬೆಳೆ ಒಣಗುತ್ತಿದೆ. ಈಗಾಗಲೇ ಗದಗದ ಹಲವೆಡೆ ಈರುಳ್ಳಿ ಹಾಗೂ ಮೆಣಸಿಕಾಯಿ ಬೆಳೆಗಳು ಮಳೆಗೆ ಹಾಳಾಗಿವೆ. ಅದರಲ್ಲೂ ಈಗ ಕಡಲೆ ಬೆಳೆ ನಾಶವಾಗುತ್ತಿರೋದು, ರೈತರು ತಲೆಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ.
ಗದಗ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ನರಗುಂದ ತಾಲೂಕಿನಲ್ಲಿ ಕಡಲೆ ಬೆಳೆಗಳು ಒಣಗುತ್ತಿದೆ. ಹೀಗಾದರೆ ನಾವು ಬದುಕೋದಾದರೂ ಹೇಗೆ ಎನ್ನುತ್ತಿದ್ದಾರೆ ಅನ್ನದಾತರು. ನೊಂದವರ ನೆರವಿಗೆ ಸರ್ಕಾರ ಧಾವಿಸದಿದ್ದರೆ, ಆತ್ಮಹತ್ಯೆ ಒಂದೇ ದಾರಿ ಅಂತಿದ್ದಾರೆ ಜಿಲ್ಲೆಯ ರೈತರು.
ಮಳೆ ನಿಂತರೂ, ಮಳೆ ಹನಿ ನಿಲ್ಲಲಿಲ್ಲ ಅಂತಾರಲ್ವಾ? ಹಾಗೇ ಮಳೆ ನಿಂತ್ರೂ ಗದಗ ಜಿಲ್ಲೆಯಲ್ಲಿ ರಣಮಳೆ ಮಾಡಿದ ಅವಾಂತರ ಮಾತ್ರ ಕರುಳು ಹಿಂಡುತ್ತಲೇ ಇದೆ. ಜಿಲ್ಲೆಯಲ್ಲಿ ಇಷ್ಟೊಂದು ಹಾನಿಯಾದ್ರೂ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್, ಶಾಸಕರಾದ ಹೆಚ್.ಕೆ ಪಾಟೀಲ್, ಕಳಕಪ್ಪ ಬಂಡಿ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಕನಿಷ್ಠ ಸಾಂತ್ವನ ಹೇಳುವ ಕೆಲಸ ಕೂಡ ಮಾಡದೇ ಇರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದ್ರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ನೊಂದ ರೈತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದೆ, ಇಲ್ಲದಿದ್ರೆ ಅನ್ನದಾತನ ಕೆಂಗಣ್ಣಿಗೆ ಗುರಿಯಾಗೋದು ಖಂಡಿತ.












