ಕಳೆದ ಕೆಲ ದಿನಗಳಿಂದ ಉಧೋ ಎಂದು ಸುರಿಯುತ್ತಿರುವ ಮಳೆಗೆ ಸಿಲಿಕಾನ್ ಸಿಟಿ ನಲುಗಿದೆ. ಮನೆಗ ನೀರು ನುಗ್ಗಿ ಅವಾಂತರ.. ಕಟ್ಟಡ ಕುಸಿತ.. ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳೆಲ್ಲಾ ಮಳೆಯಿಂದಾಗಿ ಕೆರೆಯಂತಾಗಿದೆ. ನಗರದ ಯಲಹಂಕದ ಅಪಾರ್ಟ್‌ಮೆಂಟ್‌ವೊಂದು ಇದೀಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಯಂತಾಗಿದೆ.
ಮೂರಡಿ ನೀರು.. ತತ್ತರಿಸಿದ ಜನ ಜೀವನ.. ಇನ್ನೂ 3 ದಿನ ಭಾರೀ ಮಳೆ ಎಚ್ಚರಿಕೆ.!!
ಇಡೀ ರಾಜ್ಯವೇ ಈಗ ಮಳೆ ಹೊಡೆತಕ್ಕೆ ತತ್ತರಿಸುತ್ತಿದೆ. ಬೆಳೆನಾಶ ಸೇರಿದಂತೆ ಜನಜೀವನವೇ ಹದಗೆಡುತ್ತಿದೆ. ಇದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಹೊರತಾಗಿಲ್ಲ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಿಲಿಕಾನ್ ಮಂದಿ ಭೀತಿಯಲ್ಲಿ ಬದುಕುವಂತಾಗಿದೆ. ಮಳೆ ನೀರು ಏಕಾಏಕಿಯಾಗಿ ಮನೆಗಳಿಗೆ ನುಗ್ಗುವುದು, ಹಠಾತ್ತನೇ ಮರಗಳು ನೆಲಕ್ಕಚ್ಚುವುದು, ಕಟ್ಟಡ ಕುಸಿಯುವುದು ಈ ರಣ ಮಳೆಗೂ ಮುಂದುವರೆದಿದೆ. ಈಗಾಗಲೇ ಬಿಬಿಎಂಪಿ ಮಳೆ ನಿರ್ವಹಣೆಯಲ್ಲಿ ನಿರತವಾಗಿದ್ದು, ಪಾಲಿಕೆ ಸಾಮರ್ಥ್ಯ ಮೀರಿ ಪ್ರಯತ್ನಿಸಿದರೂ ಅವಾಂತರಗಳು ಕಡಿಮೆಯಾಗುತ್ತಿಲ್ಲ.
ರಣ ಮಳೆಗೆ ತುಂಬಿ ಹರಿದ ಯಲಹಂಕ ಕೆರೆ.!!
ನಗರದ ಯಲಹಂಕ ಕೆರೆ ನಿರಂತರ ಮಳೆಯಿಂದಾಗಿ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಈ ಕೆರೆಯ ಕೋಡಿ ಕಟ್ಟೆ ಹೊಡೆದು ನೀರು ಜನ ವಾಸಸ್ಥಳಕ್ಕೆ ನುಗ್ಗಿದೆ. ಯಲಹಂಕ ಕೆರೆ ಕಟ್ಟೆ ಹೊಡೆದ ಪರಿಣಾಮ ಪಕ್ಕದಲ್ಲೇ ಇರುವ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಬೇಸ್ಮೆಂಟ್‌ಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮೊನ್ನೆ ರಾತ್ರಿ ಸುರಿದ ಜೋರು ಮಳೆಯಿಂದಾಗಿ ಹೊಡೆದ ಕೋಡಿ ಕಟ್ಟೆ ಈಗ ಜನರ ನಿದ್ದೆ ಕೆಡಿಸಿದೆ. ಸದ್ಯ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಪಾರ್ಕಿಂಗ್ ಜಾಗ ಕೆರೆಯಂತಾಗಿದೆ. ಇಡೀ ಅಪಾರ್ಟ್‌ಮೆಂಟ್‌ನ ಸುತ್ತಮುತ್ತ ನೀರು ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಇಲ್ಲಿನ ನಿವಾಸಿಗಳು ಅಗತ್ಯವಸ್ತುಗಳನ್ನು ಖರೀದಸುವುದಕ್ಕೂ ಕೂಡ ಪರದಾಡುವಂಥ ಸ್ಥಿತಿಯಲ್ಲಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಕಾರ್ಯದರ್ಶಿ ಕೃಷ್ಣ, ಪಕ್ಕದ ಕೆರೆ ಕೋಡಿ ಹೊಡೆದು ನೀರು ಅಪಾರ್ಟ್ಮೆಂಟ್ ಗೆ ನುಗ್ಗಿದೆ. ಎರಡು ದಿನಗಳಿಂದ ಇದೇ ರೀತಿ ಇದೆ, ನೀರು ಹೊರ ಹಾಕುವ ಕೆಲಸ ನಡೆಯುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಬಂದು ಬೇಕಾದ ಕೆಲಸ ಮಾಡಿಕೊಟ್ಟಿದ್ದಾರೆ. ಇಲ್ಲಿಂದ ನೀರು ಎಲ್ಲಿಗೂ ಹೊರ ಬಿಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಬಂದು ಪಕ್ಕದ ರಾಜಕಾಲುವೆಗೆ ನೀರು ಬಿಡಲು ಹೇಳಿದ್ದಾರೆ. ಹಾಗೆ ಗೋಡೆ ಹೊಡೆದು ನೀರು ಕಾಲುವೆಗೆ ಬಿಡುತ್ತಿದ್ದೇವೆ. ಬೆಸ್ಕಾಂ ಅಧಿಕಾರಿಗಳೂ ಬಂದು ಕರೆಂಟ್ ಕಟ್ ಮಾಡಿದ್ದಾರೆ. ನೀರೆಲ್ಲಾ ತೆರವಾದ ಬಳಿಕ ಕರೆಂಟ್ ಮತ್ತೆ ಕೊಡ್ತೀವಿ ಅಂತ ಹೇಳಿದ್ದಾರೆ. ಈಗಲೇ ಕರೆಂಟ್ ಕೊಟ್ರೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇದೆ. ಹೀಗಾಗಿ ನೀರು ಸಂಪೂರ್ಣವಾಗಿ ತರೆವಾದ ಬಳಿಕ ಕರೆಂಟ್ ಬರುತ್ತೆ ಎಂದು ಹೇಳಿದರು.
ಇನ್ನು ಮಕ್ಕಳಿಗೆ ಹಾಗೂ ವಯಸ್ಕರಿಗೆ ಅಗತ್ಯಕ್ಕೆ ತಕ್ಕಂತೆ ಹೊರ ಹೋಗಲು ಮತ್ತು ಒಳ ಬರಲು ಅಪಾರ್ಟ್‌ಮೆಂಟ್ ಕಮಿಟಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಸುಮಾರು ಎರಡು ಅಡಿಯಷ್ಟು ನೀರು ಇಲ್ಲಿ ನಿಂತಿರುವುದು ಸಣ್ಣಪುಟ್ಟ ವಾಹನಗಳ ಓಡಾಟಕ್ಕೂ ಸಾಧ್ಯವಾಗುತ್ತಿಲ್ಲ. ಇವಿಷ್ಟು ಒಂದು ಕಡೆಯಾದರೆ ಬೆಂಗಳೂರಿನಲ್ಲಿ ಇನ್ನೂ ಎರಡ್ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇಂದು ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಿದೆ. ಇನ್ನು ಇದು ಕೇವಲ ಒಂದೆರಡು ದಿನಕ್ಕೆ ಸುರಿದ ಮಳೆಯಾಗಿರುವ ಅವಾಂತರ. ಇನ್ನೂ ಮಳೆಯಾರ್ಭಟ ನಗರದಲ್ಲಿ ಇದೇ ರೀತಿ ಮುಂದುವರೆದರೆ ಸಿಲಿಕಾನ್ ಸಿಟಿ ಬೆಂಗಳೂರು ಮತ್ತಷ್ಟು ಅವಾಂತರಗಳಿಗೆ ಸಾಕ್ಷಿಯಾಗಲಿದೆ. ಅದಕ್ಕೂ ಮೊದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತಂದುಕೊಳ್ಳಬೇಕಿದೆ.