ಬೆಂಗಳೂರಲ್ಲಿ ಎರಡು ದಿನಗಳ ಕಾಲ ಅಬ್ಬರಿಸಿ ಬೊಬ್ಬಿರಿದ ವರುಣ ಇಂದು ತಾಳ್ಮೆ ತೋರಿಸಿದ್ದಾನೆ. ಆದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಕಡಿಮೆ ಆದರೂ ಮಳೆಯಿಂದ ಆಗಿರುವ ಅನಾಹುತಗಳ ಸರಣಿ ಮಾತ್ರ ಮುಂದುವರಿದಿದೆ. ವರುಣನ ಹೊಡೆತಕ್ಕೆ ಅನ್ನದಾತರು ಕಂಗಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಲವೆಡೆ ಕಳೆದ 24 ದಿನದಿಂದ ನಿರಂತರ ಮಳೆ ಆಗ್ತಿದೆ.. ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರೋ ಘಟನೆ ಈಚಲ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.. ಶಿಥಿಲಾವಸ್ಥೆಯಲ್ಲಿದ್ದ ಮನೆ ಗೋಡೆ ಮಳೆಗೆ ನೆಂದು ಕುಸಿದು 75 ವರ್ಷದ ರಂಗಮ್ಮ ಮೃತಪಟ್ಟಿದ್ದಾರೆ.. ಸ್ಥಳಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ, ತಹಶೀಲ್ದಾರ್ ನಾಗವೇಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಘಟನೆ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಆಗ್ತಿದ್ದು ಜನ-ಜೀವನ ಅಸ್ತವ್ಯಸ್ತವಾಗಿದೆ.. ಹಲವು ಗ್ರಾಮಗಳಿಗೆ ಮಳೆ ನೀರು ನುಗ್ಗಿದೆ.. ಹಾನಗಲ್ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಮಳೆ ನೀರು ನಿಂತ ಪರಿಣಾಮ ತೇವಾಂಶ ಹೆಚ್ಚಾಗಿ ಮನೆ ಕುಸಿದಿದೆ.. ಮಳೆ ಅಬ್ಬರಕ್ಕೆ ಗ್ರಾಮಕ್ಕೆ ಗ್ರಾಮವೇ ಜಲಾವೃತವಾಗಿದೆ.. ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸೈರನ್ ಬಿ ತಹಶೀಲ್ದಾರ್ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿದಿದ್ದು, ಮಣ್ಣಿನ ಗೋಡೆ ಹಾಗೂ ಹಂಚು ಬೀಳುವ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಬೆಳಗಾವಿ ಜಿಲ್ಲೆಯ ಸತತವಾಗಿ ಸುರಿದ ಮಳೆಯಿಂದಾಗಿ ರೈತರು ಕಂಗಲಾಗಿದ್ದಾರೆ. ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ತರಕಾರಿ ಬೆಳೆ ಹಾನಿಯಾಗಿದೆ. ರೈತ ರಾವಸಾಬ ಹೋನವಾಡೆಗೆ ಸೇರಿದ ಟೊಮ್ಯಾಟೊ, ಬದನೆಕಾಯಿ, ಹೀರೇಕಾಯಿ, ಸೌತೆಕಾಯಿ ಬೆಳೆ ನಾಶವಾಗಿದೆ. ಸುಮಾರು 3 ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಇದಾಗಿದ್ದು, ಅಕಾಲಿಕ ಮಳೆಯಿಂದಾಗಿ 20 ಲಕ್ಷ ರೂಪಾಯಿ ಆದಾಯ ಕಳೆದುಕೊಂಡಂತಾಗಿದೆ.
ದಾವಣಗೆರೆ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದೆ. ಚಾನಲ್ಗಳಲ್ಲಿ ನೀರು ತುಂಬಿ ಹರಿಹರ ಪಟ್ಟಣದ ಕಾಳಿದಾಸ, ಬೆಂಕಿನಗರ ಸೇರಿದಂತೆ ಹಲವೆಡೆ 100ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. 500ಕ್ಕೂ ಅಧಿಕ ಜನರಿಗೆ ನೆಲೆ ಇಲ್ಲದೆ ಪರದಾಡುವಂತಾಗಿದೆ. ಸ್ಥಳಕ್ಕೆ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಳಜಿ ಕೇಂದ್ರ ತೆರದು ಸಂತ್ರಸ್ಥರಿಗೆ ನೆರವು ನೀಡುವಂತೆ ಸೂಚನೆ ನೀಡಿದ್ದಾರೆ.