ಬೆಂಗಳೂರು:ಮಾ.25: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಸಂಸದ ಸ್ಥಾನವನ್ನು ಅನರ್ಹತೆ ಮಾಡಿ ಲೋಕಸಭಾ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಸೂರತ್ ಕೋರ್ಟ್ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಕೇರಳದ ವಯನಾಡು ಸಂಸದರಾಗಿದ್ದ ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವವನ್ನು ಅನರ್ಹ ಮಾಡಲಾಗಿದೆ. ಆದರೆ ಈ ಅನರ್ಹತೆ ಕಾನೂನು ಬದ್ಧವಾಗಿಲ್ಲ ಅನ್ನೋದು ವಿರೋಧ ಪಕ್ಷಗಳ ಒಕ್ಕೋರಲ ಅಭಿಪ್ರಾಯ. ಆದರೆ ಯಾವುದೇ ಓರ್ವ ಜನಪ್ರತಿನಿಧಿ 2 ವರ್ಷ ಅಥವಾ ಮೇಲ್ಪಟ್ಟು ಶಿಕ್ಷೆಗೆ ಗುರಿಯಾದರೆ ತಮ್ಮ ಸ್ಥಾನದಿಂದ ಅನರ್ಹ ಆಗುತ್ತಾರೆ. ಇದರಲ್ಲಿ ವಿರೋಧ ಪಕ್ಷ ಆಡಳಿತ ಪಕ್ಷ ಎನ್ನುವ ವಿಚಾರವಿಲ್ಲ ಎನ್ನುವುದು ಬಿಜೆಪಿ ಪರವಾದ ವಾದ. ಆದರೆ ಕಾನೂನು ಏನ್ ಹೇಳುತ್ತೆ..? ಕೇರಳದ ವಯನಾಡು ಸಂಸದ ರಾಹುಲ್ ಗಾಂಧಿಯನ್ನು ಅನರ್ಹತೆ ಮಾಡಿರುವುದು ಸರಿಯಾಗಿದೆಯಾ..? ಇಲ್ಲವಾ..? ಯಾರು ಹೇಳುತ್ತಿರುವುದು ಸರಿ..? ಯಾರು ಹೇಳುತ್ತಿರೋದು ತಪ್ಪು ಅನ್ನೋದು ಸಾರ್ವಜನಿಕರ ತಲೆ ಚಿಟ್ಟು ಹಿಡಿಯುವಂತೆ ಮಾಡಿದೆ.
ಅನರ್ಹತೆ ಪ್ರಶ್ನೆ ಸೃಷ್ಟಿ ಆಗೋದು ಯಾವಾಗ..?
ಜನರಿಂದ ಆಯ್ಕೆಯಾದ ಯಾವುದೇ ಓರ್ವ ಜನಪ್ರತಿನಿಧಿಯನ್ನು 3 ರೀತಿಯ ಸಂದರ್ಭಗಳಲ್ಲಿ ಸಂಸದ ಅಥವಾ ಶಾಸಕ ಸ್ಥಾನದಿಂದ ಅನರ್ಹತೆ ಮಾಡಲು ಕಾನೂನಿನಲ್ಲಿ ಮಾನ್ಯತೆ ಇದೆ. ಸಂವಿಧಾನದ ಆರ್ಟಿಕಲ್ 102(1) ಮತ್ತು 191(1) ಪ್ರಕಾರ ಯಾವುದೇ ಓರ್ವ ವ್ಯಕ್ತಿ ಜನಪ್ರತಿನಿಧಿ ಆಗಿ ಆಯ್ಕೆಯಾದ ಬಳಿಕವೂ ಸರ್ಕಾರದ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅನರ್ಹತೆ ಮಾಡಲಾಗುತ್ತದೆ. ಇನ್ನು ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಯಾವುದೇ ಓರ್ವ ಶಾಸಕ ಅತವಾ ಸಂಸದ ಆಯ್ಕೆಯಾದ ಪಕ್ಷವನ್ನು ಬಿಟ್ಟು, ವಿಪ್ ಉಲ್ಲಂಘಿಸಿ ಬೇರೆ ಪಕ್ಷವನ್ನು ಬೆಂಬಲಿಸುವುದು ಅಥವಾ ಸೇರುವುದು ಮಾಡಿದಾಗಲೂ ಅನರ್ಹ (ಈಗಾಗಲೇ ಕರ್ನಾಟಕ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ಮಾಡಿದಾಗ ಅನರ್ಹ ಮಾಡಲಾಗಿತ್ತು. ಆದರೆ ಬಿಜೆಪಿ ಎಲ್ಲರನ್ನೂ ಕಾನೂನು ಕುಣಿಕೆಯಿಂದ ಬಿಡಿಸುವ ಕೆಲಸ ಮಾಡಿತ್ತು)ಮಾಡಲಾಗುತ್ತದೆ. ಅಂತಿಮವಾಗಿ ಜನಪ್ರತಿನಿಧಿಗಳ ಕಾಯ್ದೆ 1951ರ ಅಡಿಯಲ್ಲಿ ಯಾವುದೇ ಶಾಸಕ ಅಥವಾ ಸಂಸದ 2 ವರ್ಷ ಮೇಲ್ಪಟ್ಟು ಶಿಕ್ಷೆಗೆ ಒಳಪಟ್ಟರೆ ಅನರ್ಹ ಮಾಡಲಾಗುತ್ತದೆ. ಆದರೆ ರಾಹುಲ್ ಗಾಂಧಿ ಪ್ರಕರಣದಲ್ಲಿ ಶಿಕ್ಷೆ ಕೊಟ್ಟ ಸೂರತ್ ಕೋರ್ಟ್, ಸ್ವತಃ ತನ್ನ ಆದೇಶವನ್ನು ಸಸ್ಪೆಂಡ್ ಮಾಡಿದ್ದು, 30 ದಿನಗಳ ಕಾಲ ಜಾಮೀನು ನೀಡಿದೆ.
ಜನಪ್ರತಿನಿಧಿಗಳ ಕಾಯ್ದೆ 1951ರಲ್ಲಿ ಹೇಳಿರುವುದು ಏನು..?
ಜನಪ್ರತಿನಿಧಿಗಳ ಕಾಯ್ದೆ ಅಡಿ ಸಂಸದ ಸ್ಥಾನವನ್ನು ಅನರ್ಹ ಮಾಡಲು ಅವಕಾಶವಿದೆ. ಸೆಕ್ಷನ್ 8ರ ಪ್ರಕಾರ ಕೆಲ ಅಪರಾಧಗಳಲ್ಲಿ ಶಿಕ್ಷೆಯಾದಾಗ, ಅದರಲ್ಲೂ ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 8(1) ಹಾಗು ಸೆಕ್ಷನ್ 8(2) ಅಡಿಯಲ್ಲಿ ಉಲ್ಲೇಖಿಸಿರುವ ಅಪರಾಧಗಳಲ್ಲಿ ಭಾಗಿಯಾಗಿ 2 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಶಿಕ್ಷೆಯಾಗಿದ್ದರೆ, ನೇರವಾಗಿ ಸಂಸದ ಅಥವಾ ಶಾಸಕ ಸ್ಥಾನ ಅನರ್ಹ ಆಗುತ್ತದೆ. ಕೋರ್ಟ್ ಆದೇಶವಾದ ದಿನದಿಂದಲೇ ಅನರ್ಹ ಆಗುತ್ತಾರೆ. ಬಿಡುಗಡೆ ನಂತರ 6 ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇರುವುದಿಲ್ಲ. ಆದರೆ ರಾಹುಲ್ ಗಾಂಧಿ ವಿವಾದಿತ ಹೇಳಿಕೆ ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 8(1) ಹಾಗು ಸೆಕ್ಷನ್ 8(2) ಅಡಿಯಲ್ಲಿ ಶಿಕ್ಷೆಯಾಗಿಲ್ಲ. ರಾಹುಲ್ ಗಾಂಧಿಗೆ ಶಿಕ್ಷೆ ಆಗಿರುವುದು ಸೆಕ್ಷನ್ 8(3) ಅಡಿಯಲ್ಲಿ. ಅಂದರೆ ಅನರ್ಹ ಮಾಡುವುದಕ್ಕೆ ಬೇಕಿದ್ದ ಅಪರಾಧ ಸೆಕ್ಷನ್ 8(1) ಹಾಗು ಸೆಕ್ಷನ್ 8(2) ಲಿಸ್ಟ್ನಲ್ಲಿ ಇರಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಸೆಕ್ಷನ್ 8(3) ಅಡಿಯಲ್ಲಿ ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆಂದು ಕೋರ್ಟ್ ತೀರ್ಪು ಕೊಟ್ಟರೂ ಅನರ್ಹತೆ ಮಾಡಿರುವುದು ಕೇಂದ್ರ ಸರ್ಕಾರದ ಮೇಲೆ ದುರುದ್ದೇಶಪೂರಿತ ಎನ್ನುವ ಹಾಗೆ ಅನುಮಾನ ಮೂಡುವಂತೆ ಮಾಡಿದೆ.

ಈ ಹಿಂದೆ ಯಾರೆಲ್ಲಾ ಅನರ್ಹ ಆಗಿದ್ದಾರೆ..?
ಇದೀಗ ರಾಹುಲ್ ಗಾಂಧಿ ಅನರ್ಹ ಆಗಿದ್ದಾರೆ. ಇದನ್ನು ಬಿಟ್ಟರೆ 2022ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶ ಶಾಸಕರಾಗಿದ್ದ ಆಝಂ ಖಾನ್ ಅನರ್ಹ ಆಗಿದ್ದರು. 2013ರ ಅಕ್ಟೋಬರ್ನಲ್ಲಿ ಸಂಸದರಾಗಿದ್ದ ಲಾಲೂ ಪ್ರಸಾದ್ ಯಾದವ್ಗೆ 5 ವರ್ಷ ಜೈಲು ಶಿಕ್ಷೆಯಾಗಿ ಅನರ್ಹರಾಗಿದ್ದರು. ಇನ್ನು 2014ರ ಸೆಪ್ಟೆಂಬರ್ನಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಶಾಸಕ ಸ್ಥಾನದಿಂದ ಅನರ್ಹ ಆಗಿದ್ದರು. ಆದರೆ ನಮ್ಮದೇ ಕರ್ನಾಟಕದಲ್ಲಿ ಬಿಜೆಪಿಯ ಇಬ್ಬರು ಶಾಸಕರಿಗೆ ಜೈಲು ಶಿಕ್ಷೆ ಆಗಿದೆ. ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ 8 ಚೆಕ್ಬೌನ್ಸ್ ಪ್ರಕರಣದಲ್ಲಿ 4 ವರ್ಷಗಳ ಕಾಲ ಜೈಲು ಶಿಕ್ಷೆಯಾಗಿದೆ. ಅದೇ ರೀತಿ ಕಾಮಗಾರಿಯನ್ನೇ ನಡೆಸದೆ ಬಿಲ್ ಪಾಸ್ ಮಾಡಿಕೊಂಡ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಾವೇರಿ ಶಾಸಕ ನೆಹರೂ ಓಲೆಕಾರ್ಗೆ 2 ವರ್ಷ ಜೈಲು ಶಿಕ್ಷೆ ಹಾಗು 2 ಸಾವಿರ ದಂಡ ವಿಧಿಸಿದೆ. ಆದರೆ ಕೇಂದ್ರದಲ್ಲಿ ಒಂದೇ ದಿನದಲ್ಲಿ ಕಾಂಗ್ರೆಸ್ ಸಂಸದನ ಸ್ಥಾನವನ್ನು ಅನರ್ಹ ಮಾಡಿದ ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ತನ್ನದೇ ಇಬ್ಬರು ಶಾಸಕರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಬ್ಬರೂ ಕೂಡ ಕ್ರಿಮಿನಲ್ ಮೊಕದ್ದಮೆಯಲ್ಲಿ ಶಿಕ್ಷೆಗೆ ಒಳಪಟ್ಟಿದ್ದಾರೆ. ಇವರನ್ನು ಅನರ್ಹ ಮಾಡೋದು ಯಾವಾಗ..? 6 ವರ್ಷಗಳ ಕಾಲ ಚುನಾವಣೆ ಸ್ಪರ್ಧೆ ಮಾಡದಂತೆ ಅನರ್ಹ ಮಾಡುತ್ತದೆಯೇ..? ಅಥವಾ ಕಾಂಗ್ರೆಸ್ ವಿರುದ್ಧ ಸೇಡಿನ ಕ್ರಮ ಕೈಗೊಳ್ಳುವ ಉದ್ದೇಶವೇ ಎನ್ನುವುದು ಕಾಂಗ್ರೆಸ್ ಪ್ರಶ್ನೆಯಾಗಿದೆ.
ಕೃಷ್ಣಮಣಿ












