~ಡಾ. ಜೆ ಎಸ್ ಪಾಟೀಲ.
ನವದೆಹಲಿ:ಏ.01: ಕಳೆದ ಒಂದೆರಡು ವಾರಗಳಲ್ಲಿ ದೇಶದಲ್ಲಿ ನಡೆದಿರುವ ಬೆಳವಣಿಗೆಗಳು ಖಂಡಿತ ದೇಶದ ಹಿತದಲ್ಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಕಾರ್ಪೋರೇಟ್ ಸಾಮ್ರಾಜ್ಯಗಳು ಸರಕಾರವನ್ನು ನಿಯಂತ್ರಿಸುತ್ತಿರುವ ಈ ದುರಿತ ಕಾಲದಲ್ಲಿ ಬಲಪಂಥೀಯ ಧಾರ್ಮಿಕ ಮೂಲಭೂತವಾದಿಗಳು ಮತ್ತು ಬಂಡವಾಳಶಾಹಿಗಳ ಅನೈತಿಕ ಮೈತ್ರಿ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಿದೆ ಎನ್ನುವ ಆತಂಕ ಜನರಲ್ಲಿ ಇಲ್ಲದಿದ್ದರೆ ಜನರು ಆತ್ಮಹತ್ಯೆಯ ಮಾರ್ಗ ತುಳಿದಿದ್ದಾರೆ ಎಂದೇ ಹೇಳಬೇಕಾಗಿದೆ. ಸರಕಾರ ನಡೆಸುವವರ ಕೈ-ಬಾಯಿ ಪರಿಶುದ್ಧವಾಗಿದ್ದರೆ ಆಳುವ ಸರಕಾರ ಮತ್ತು ಕೈಗಾರಿಕೋದ್ಯಮಿಗಳ ಅನೈತಿಕ ನಂಟಿನ ಕುರಿತು ಎಳುವ ಪ್ರಶ್ನೆಗಳನ್ನು ದಮನಿಸುವ ಪ್ರಶ್ನೆ ಬರುವುದಿಲ್ಲ.
ಆಳುವ ಪಕ್ಷ ಮತ್ತು ಅದರ ಅನಧಿಕೃತ ಐಟಿ ಸೆಲ್ಗಳು ವಿರೊಧ ಪಕ್ಷದ ನಾಯಕನೊಬ್ಬನನ್ನು ಅಸಮರ್ಥ ಎಂದು ಬಿಂಬಿಸುವ ಕೃತ್ಯಕ್ಕೆ ಸಾವಿರಾರು ಕೋಟಿ ವ್ಯಯಿಸುತ್ತಿದೆ ಎನ್ನುವಲ್ಲಿಗೆ ಆಡಳಿತ ಪಕ್ಷ ಸತ್ಯದ ಹಾದಿಯಲ್ಲಿಲ್ಲ ಮತ್ತು ವಿರೋಧಿಗಳನ್ನು ದಮನಿಸಿ ತಮ್ಮ ಅನಾಚಾರಗಳನ್ನು ಮುಚ್ಚಿಡಲೆತ್ನಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಕೇವಲ ಒಬ್ಬ ಕಾರ್ಪೋರೇಟ್ ಉದ್ಯಮಿಯನ್ನು ರಕ್ಷಿಸಲು ದೇಶದ ೭೦ ವರ್ಷಗಳ ಸಂಸದಿಯ ಇತಿಹಾಸದಲ್ಲಿ ನಡೆಯದಿರುವ ಘಟನೆಯೊಂದು ನಡೆದುಹೋಗಿದೆ. ಒಬ್ಬ ಕಳ್ಳೋದ್ಯಮಿಯನ್ನು ರಕ್ಷಿಸಲು ದೇಶದ ಹಿತಾಸಕ್ತಿ ಬಲಿಕೊಡುವುದು ದೇಶದ್ರೋಹಕ್ಕಿಂತ ದೊಡ್ಡ ಅಪರಾಧ ಎನ್ನುವುದು ನನ್ನ ನಂಬಿಕೆ.
ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳಿಗಾಗಿ ಅವರಿಗೆ ಕಾನೂನು ವ್ಯಾಪ್ತಿಯೊಗಳಿರುವಂತೆ ಗೋಚರಿಸುವ ಅದರ ವ್ಯಾಪ್ತಿಗೆ ಮೀರಿದ ಶಿಕ್ಷೆ ನೀಡಲಾಗಿದೆ ಎನ್ನುವುದು ಅನೇಕ ಕಾನೂನು ತಜ್ಞರ ಅಭಿಪ್ರಾಯವಾಗಿದೆ. ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡಿದ ವ್ಯಕ್ತಿಯೇ ಆ ಮೊಕದ್ದಮೆಗೆ ತಡೆ ತಂದಿದ್ದು ಈಗ ಅದಾನಿ ಕುರಿತು ರಾಹುಲ್ ಪ್ರಶ್ನಿಸುತ್ತಿದ್ದಂತೆ ಧಿಡೀರ್ ಎಂದು ತಡೆ ತೆರವುಗೊಳಿಸಿˌ ಶೀರ್ಘ ವಿಚಾರಣೆ ಮುಗಿಸಿ ಗರಿಷ್ಟ ಶಿಕ್ಷೆ ನೀಡಿದ್ದು ಮತ್ತು ಮೇಲ್ಮನವಿಗೆ ಸಮಯಾವಕಾಶ ಇರುವಾಗಲೆ ತರಾತುರಿಯಲ್ಲಿ ಅನರ್ಹಗೊಳಿಸಿದ್ದು ಎಲ್ಲವೂ ಅದಾನಿಯನ್ನು ರಕ್ಷಿಸಲು ಗುಜರಾತಿಗಳೆಲ್ಲರೂ ಸೇರಿ ಮಾಡಿದ ಪಿತೂರಿಯಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.
ಆದರೆ ರಾಹುಲ್ ಎತ್ತಿರುವ ನ್ಯಾಯಯುತ ಪ್ರಶ್ನೆಗಳಿಗೆ ಉತ್ತರಿಸುವ ಉತ್ತರದಾಯಿತ್ವ ಹೊಂದಿದವರು ಆ ಕುರಿತು ಯಾವುದೇ ಪ್ರಯತ್ನ ಮಾಡದೆ ಯಾರೂ ನಮ್ಮನ್ನು ಪ್ರಶ್ನಿಸಕೂಡದುˌ ಪ್ರಶ್ನಿಸುವವರೆಲ್ಲರೂ ದೇಶದ್ರೋಹಿಗಳು ಎನ್ನುವ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಈ ರೀತಿಯ ದಮನಕಾರಿˌ ಸರ್ವಾಧಿಕಾರಿ ಪ್ರವೃತ್ತಿಯ ಶಕ್ತಿಗಳು ಕಾಲಕಾಲಕ್ಕೆ ಸಾಕಷ್ಟು ಸದ್ದು ಮಾಡಿ ಶಾಸ್ವತವಾಗಿ ಸದ್ದಡಗಿ ಹೋಗಿರುವ ಜಾಗತಿಕ ಐತಿಹಾಸಿಕ ದಾಖಲೆಗಳು ನಮ್ಮ ಕಣ್ಣೆದುರಿಗಿವೆ. ಇತಿಹಾಸದಿಂದ ದುರುಳರು ಯಾವತ್ತೂ ಪಾಠ ಕಲಿಯುವುದಿಲ್ಲ ಎನ್ನುವದನ್ನು ನಾವು ಅರಿತಿದ್ದೇವೆ. ಎಲ್ಲಕ್ಕೂ ಮೇಲೆ ನಿಸರ್ಗವು ತನ್ನದೆ ಆದ ಸಮತೋಲದ ನ್ಯಾಯ ತನ್ನ ಒಡಲೊಳಗೆ ಹುದುಗಿಟ್ಟುಕೊಂಡು ಅದನ್ನು ಸೂಕ್ತ ಸಮಯದಲ್ಲಿ ಪ್ರಯೋಗಿಸುತ್ತದೆ ಎನ್ನುವುದು ನಾವು ಮರೆಯಬಾರದು.
ಭಾರತದ ಪ್ರಜಾತಂತ್ರ ಮತ್ತು ಜಾತ್ಯಾತೀತತೆ ಅಪಾಯಕ್ಕೆ ಸಿಲುಕಿರುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನತಂತ್ರ ಮತ್ತು ಜಾತ್ಯಾತೀತ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ಪುರೋಹಿತರ ಆಶಯದಂತೆ “ಯದಾ ಯದಾ ಹಿ ಧರ್ಮಶ್ಯ” ಅನ್ನುವ ಹಾಗೆ ಯಾರಾದರೂ ಅವತಾರಿ ಪುರುಷರ ಆಗಮನದ ನಿರೀಕ್ಷೆಯಂತೂ ದೇಶದ ಜನಕ್ಕೆ ಖಂಡಿತವಾಗಿ ಇದೆ. ಭೂಮಿಯ ಮೇಲೆ ಅಧರ್ಮಿಗಳ ಅನ್ಯಾಯ ಹೆಚ್ಚಾದಾಗೆಲ್ಲ ದೆವರು ಅವತಾರ ತಾಳುತ್ತಾನೆ ಎನ್ನುವ ಪುರೋಹಿತರ ನಂಬಿಕೆ ಸತ್ಯವಾಗುವ ಸೂಚನೆಗಳು ಗೋಚರಿಸಹತ್ತಿವೆ.
ಕನಿಷ್ಠ ವಿದ್ಯಾರ್ಹತೆ ಅಥವಾ ಶೈಕ್ಷಣಿಕ ಹಿನ್ನೆಲೆಯೆ ಇಲ್ಲದವರ ಕೈಸೇರಿದ ಈ ಬಹು ಸಂಸ್ಕ್ರತಿಯ ಭಾರತ ದೇಶದ ಆಡಳಿತ ದೇಶದ ಸಮಗ್ರತೆಗೆˌ ಸೌಹಾರ್ದತೆˌ ಆರ್ಥಿಕತೆ ಎಲ್ಲವನ್ನು ಬುಡಮೇಲು ಮಾಡುತ್ತಿದೆ. ಕೋಮುವಾದಿಗಳ ಕೈಗೆ ಶಿಕ್ಷಣ ಖಾತೆ ಸಿಲುಕಿ ಹೈದರಾಬಾದ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಎರಡು ಮೂರು ವರ್ಷಗಳ ಹಿಂದೆ ಬೀಗ ಜಡಿಯಲಾಗಿದೆ. ಅಲ್ಲಿ ಪ್ರತಿಭಟನಾ ನಿರತ ವಿಧ್ಯಾರ್ಥಿಗಳಿಗೆ ಅನ್ನ ನೀರುˌ ಅಂತರ್ಜಾಲ ಸಂಪರ್ಕಗಳನ್ನು ಕಡಿತಗೋಳಿಸಿ ಅಕ್ಷರಶಃ ತುರ್ತು ಪರಿಸ್ಥಿತಿ ನೆನಪಿಗೆ ಬರುವಂತ ವಾತಾವರಣ ಸೃಷ್ಟಿಮಾಡಲಾಗಿತ್ತು.
ಪ್ರತಿಭಟನೆˌ ಅಭಿವ್ಯಕ್ತಿ ಸ್ವಾತಂತ್ರ ಹತ್ತಿಕ್ಕುವ ಹುನ್ನಾರಗಳು ಆಳುವವರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಅನುಸರಿಸುವ ಸಾಮಾನ್ಯ ವಾಮ ಮಾರ್ಗಗಳು. ಆದರೆ ಮುಂದೆ ಆ ಕ್ರಾಂತಿಯ ಕಿಡಿ ಒಂದು ಜ್ವಾಲೆಯಾದೀತು ಎನ್ನುವ ಕನಿಷ್ಠ ಪ್ರಜ್ಞೆ ತಪ್ಪೆಸಗುವವರಿಗೆ ಇರುವುದೇ ಇಲ್ಲ. ಈಗ ಪ್ರಭುತ್ವದ ದಮನಿಸುವ ಕೃತ್ಯಗಳಿಗೆ ತಡೆಯೊಡ್ಡುವ ಶಕ್ತಿ ರೂಪುಗೊಳ್ಳುತ್ತಿದೆ. ನಿಸರ್ಗವು ಪ್ರತಿಯೊಂದು ಅಕ್ರಮಗಳಿಗೆ ಒಂದು ಕೊನೆಯನ್ನು ರೂಪಿಸಿಟ್ಟಿರುತ್ತದೆ. ಅದು ಸರಿಯಾದ ಸಮಯದಲ್ಲಿ ತನ್ನ ಕೆಲಸವನ್ನು ಮಾಡಿ ಮುಗಿಸುತ್ತದೆ.
ಸುಳ್ಳು ಭರವಸೆˌ ಪೊಳ್ಳು ಅಶ್ವಾಸನೆ ಮತ್ತು ಭಾಷಣದ ಜಾಣ್ಮೆಯಿಂದಲೇ ದೇಶಕಟ್ಟಬಲ್ಲೆವು ಎನ್ನುವವರಿಗೆ ತಮ್ಮ ತಪ್ಪುಗಳು ಜನತಗೆ ತಿಳಿಯುತ್ತಿವೆ ಎಂದು ಗೊತ್ತಾಗುತ್ತಲೇ ಬೆದರಿಹೋಗುವುದು ಮತ್ತು ತಪ್ಪು ಕಂಡುಹಿಡಿಯುವವರನ್ನು ಹತ್ತಿಕ್ಕುವುದು ಅವರ ಆದ್ಯತೆಯಾಗುತ್ತದೆ. ಸಂಸತ್ತಿನ ಒಳಗೆ ಮತ್ತು ಹೊರಗೆ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಗಳಿಗೆ ಪ್ರಾಂಜಲ ಮನಸ್ಸಿನಿಂದ ಉತ್ತರಿಸಲು ಆಗದಿರುವ ಕಾರಣದಿಂದ ಮತ್ತು ರಾಹುಲ್ ಪ್ರಶ್ನೆಗಳಿಂದ ಹುಟ್ಟಿದ ಭಯದಿಂದ ಈಗ ರಾಹುಲ್ ಗಾಂಧಿಗೆ ಶಿಕ್ಷೆ ನೀಡುವ ದುರುಳತನ ಪ್ರಭುತ್ವದ ದೈತ್ಯರು ತೋರಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ಒಂದು ಬಿರುಗಾಳಿಯಂತೆ ಪ್ರಭುತ್ವದ ಪ್ರಮಾದಗಳ ವಿರುದ್ಧ ಧಂಗೆ ಎದ್ದಿರುವುದುˌ ಆತನ ಮುದ್ಗತೆˌ ದೇಶದ ಬಗೆಗಿನ ಕಳಕಳಿˌ ಸಾರ್ವಜನಿಕ ಸ್ವತ್ತುಗಳು ಕಾರ್ಪೋರೇಟ್ ಕಳ್ಳರ ಪಾಲಾಗುತ್ತಿರುವುದರ ಕುರಿತ ಆತಂಕˌ ಮತ್ತು ವಿಷಮ ಪರಿಸ್ಥಿತಿಯಲ್ಲಿ ದೇಶದ ಪರವಾಗಿ ಧ್ವನಿ ಎತ್ತುವ ಜಾಣ್ಮೆ ಮತ್ತು ದೇಶಾದ್ಯಂತ ಹಾಗು ಜಾಗತಿಕ ಮಟ್ಟದಲ್ಲಿ ಆತನಿಗೆ ಜನತಂತ್ರವಾದಿಗಳಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲವನ್ನು ಗಮನಿಸಿದರೆ ಮುಂದೆ ಆತ ಆಳುವವರ ಪಾಲಿಗೆ ಒಂದು ಭಯಾನಕ ಸುನಾಮಿಯಾಗಿ ಪರಿಣಮಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.
ಧಾರ್ಮಿಕ ಮೂಲಭೂತವಾದದ ತಳಹದಿಯಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರದಲ್ಲಿನ ಆಡಳಿತ ಪಕ್ಷ ಮತ್ತು ಅದನ್ನು ನಿಯಂತ್ರಿಸುತ್ತಿರುವ ಕರ್ಮಟ ಅಸಂವಿಧಾನಿಕ ಶಕ್ತಿಗಳು ಈ ನೆಲದ ಅಂತಃಶಕ್ತಿಯಾಗಿರುವ ಪ್ರಜಾಪ್ರಭುತ್ವದ ಆಶಯಗಳನ್ನು ಎಂದಿಗೂ ಗೌರವಿಸುವುದಿಲ್ಲ. ಅವು ನಮ್ಮ ಪವಿತ್ರ ಸಂವಿಧಾನದಲ್ಲೂ ನಂಬಿಕೆಯಿಟ್ಟಿಲ್ಲ. ಈ ಅಸಂಧಾನಿಕ ಶಕ್ತಿಗಳು ಪೂರ್ವದಿಂದಲೂ ಈ ನೆಲಕ್ಕೆ ವಿಧೇಯವಾಗಿಲ್ಲದಿರುವುದು ಐತಿಹಾಸಿಕ ಸತ್ಯ. ದೇಶದ ಸ್ವಾತಂತ್ರ ˌ ಜನತಂತ್ರ ವ್ಯವಸ್ಥೆ ˌ ಸಂವಿಧಾನದ ಸಾರ್ವಭೌಮತ್ವವನ್ನು ಒಪ್ಪದ ಅಸಂವಿಧಾನಿಕ ಶಕ್ತಿಗಳು ಈ ದೇಶಕ್ಕೆ ಅಂಟಿದ ಕ್ಯಾನ್ಸರ್ ರೋಗದಂತೆ.
ತಮ್ಮ ಪರಂಪರಾಗತ ಶ್ರೇಣೀಕೃತ ವರ್ಣವ್ಯವಸ್ಥೆಯ ಪ್ರತಿಪಾದನೆ ಮತ್ತು ಒಂದು ಜನಾಂಗದ ಏಳಿಗೆಯನ್ನು ತಮ್ಮ ಗುಪ್ತಸೂಚಿ ಕಾರ್ಯತಂತ್ರ ಮಾಡಿಕೊಂಡಿರುವ ಇವರ ಬಂಡವಾಳವನ್ನು ಸಾಮಾನ್ಯ ಜನತೆಗೆ ಮುಟ್ಟಿಸುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗುವ ಲಕ್ಷಣಗಳನ್ನು ಗುರುತಿಸಿರುವ ಪ್ರಭುತ್ವˌ ಆತನ ಹೋರಾಟ ಮತ್ತು ಕಾರ್ಯತಂತ್ರಗಳನ್ನು ಮಟ್ಟಹಾಕಲು ಸುಳ್ಳು ದೇಶದ್ರೋಹದ ಆಪಾದನೆಯ ಸಹಾಯ ಪಡೆಯುತ್ತಿವೆ. ಆತನನ್ನು ಮತ್ತು ಆತನ ಕುಟುಂಬವನ್ನು ಇನ್ನಿಲ್ಲದಂತೆ ಅವಹೇಳನ ಮಾಡಲಾಗುತ್ತಿದೆ.
ಆದರೆˌ ಮೊದಮೊದಲು ದೆಹಲಿಗೆ ಮತ್ತು ಸಂಸತ್ತಿಗೆ ಸೀಮಿತವಾಗಿದ್ದ ರಾಹುಲ್ ಗಾಂಧಿಯ ಪ್ರಭುತ್ವದ ವಿರುದ್ಧದ ಹೋರಾಟ ಭಾರತ್ ಜೋಡೊ ಯಾತ್ರೆಯ ನಂತರ ದೇಶವ್ಯಾಪಿ ವಿಸ್ತರಿಸಿದಂತೆ ಕಾಣುತ್ತಿವೆ. ಬ್ರಿಟೀಷ್ ಹುಕುಮತ್-ಶಾಹಿಯ ವಿರುದ್ಧದ ಸ್ವಾತಂತ್ರ ಚಳುವಳಿಯ ನಂತರ ಬ್ರಾಹ್ಮಣಶಾಹಿ ನಿರಂಕುಶ ಪ್ರಭುತ್ವದ ವಿರುದ್ಧ ಮತ್ತೊಂದು ಸುತ್ತಿನ ಸ್ವಾತಂತ್ರ ಚಳುವಳಿ ಹೆಮ್ಮರವಾಗಿ ಬೆಳೆದುˌ ಮುಂದಿನ ಸಂಸತ್ ಚುನಾವಣೆಯ ವೇಳೆಗೆ ಆಳುವ ಪಕ್ಷದ ವಿರುದ್ಧ ಒಂದು ನಿರ್ಧಿಷ್ಟ ಜನಾಭಿಪ್ರಾಯ ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವ ಎಲ್ಲ ಸಾಧ್ಯಗಳು ನಿಚ್ಚಳವಾಗಿ ಗೋಚರಿಸುತ್ತಿವೆ.
“ಯದಾ ಯದಾ ಹೀ ಧರ್ಮಶ್ಯ…………………….
ಸಂಭವಾಮಿ ಯುಗೇ… ಯುಗೇ….!! “
ಡಾ. ಜೆ. ಎಸ್ .ಪಾಟೀಲ.