ಕರೋನಾ ಎರಡನೇ ಅಲೆ ದೇಶದ ಜನರನ್ನು ಭಯಭೀತರನ್ನಾಗಿ ಮಾಡಿದ್ದು, ವೈದ್ಯಕೀಯ ವ್ಯವಸ್ಥೆ ಹದಗೆಟ್ಟು, ದೇಶದಲ್ಲಿ ಲಸಿಕೆ, ಬೆಡ್, ಆಕ್ಸಿಜನ್ ಸೇರಿದಂತೆ ಇತರೆ ವೈದ್ಯಕೀಯ ಸಮಸ್ಯೆ ಎದುರಾಗಿದೆ.
ಇದೀಗ ಮೂರನೇ ಅಲೆ ಎರಡನೇ ಅಲೆಗಿಂತಲೂ ಭೀಕರವಾಗಿದ್ದು, ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಈಗಾಗಲೇ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಕರೋನಾ ನಿಯಂತ್ರಣ ಸಂಬಂಧ ಪದೇ-ಪದೇ ಮೋದಿ ಸರ್ಕಾರವನ್ನು ಎಚ್ಚರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಟ್ವೀಟ್ ಮಾಡಿ ಮುಂದಾಗುವ ಅನಾಹುತವನ್ನು ತಡೆಯುವತ್ತ ಸರ್ಕಾರ ಕೂಡಲೇ ಗಮನಹರಿಸಬೇಕು. ಮಕ್ಕಳನ್ನು ರಕ್ಷಿಸಲು ವೈದ್ಯಕೀಯ ಕ್ಷೇತ್ರವನ್ನು ಬಲಪಡಿಸುವಂತೆ ಸಲಹೆ ಕೊಟ್ಟಿದ್ದಾರೆ.
ಮಕ್ಕಳ ಆರೋಗ್ಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಹೆಚ್ಚಿನ ರಕ್ಷಣೆಗೆ ಕೊಡುವ ಅವಶ್ಯಕತೆಯಿದೆ. ಚಿಕ್ಕಮಕ್ಕಳ ಆರೋಗ್ಯ ಸೇವೆ, ಲಸಿಕೆ, ಚಿಕಿತ್ಸೆಯ ಬಗ್ಗೆ ಈಗಾಗಲೇ ಪ್ರೋಟೋಕಾಲ್ ಜಾರಿಯಲ್ಲಿರಬೇಕಿತ್ತು. ಮೋದಿ ಸರ್ಕಾರ ನಿದ್ದೆಯಿಂದ ಹೊರಬಂದು ಕರೋನಾದಿಂದ ಭಾರತದ ಮುಂದಿನ ಭವಿಷ್ಯ ಕಾಪಾಡುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.