ವರನಟ ರಾಜ್‌ಕುಮಾರ್ ಕಿರಿಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಗಣ್ಯರು, ಸಿನಿಮಾ ಬಳಗದವರು ಕಂಬನಿ ಮಿಡಿದಿದ್ದಾರೆ. ವಿಶ್ವಾದ್ಯಂತ ಇರುವ ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ.
ಮನೆಮಗನನ್ನು ಕಳೆದುಕೊಂಡಂತೆ ಪ್ರತಿ ಮನೆಯ ಅಮ್ಮಂದಿರು ಶೋಕದಲ್ಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದ ಪುನೀತ್ ರಾಜ್‌ಕುಮಾರ್ ಅವರ ನಿಧನ ಕನ್ನಡ ಚಿತ್ರರಂಗಕ್ಕೊಂದು ಬಹುದೊಡ್ಡ ಆಘಾತವೇ ಸರಿ.
ರಾಜ್ಯಕ್ಕೆ ರಾಜ್ಯವೇ ಶೋಕದಲ್ಲಿದ್ದರೂ, ಪುನೀತ್ ಎರಡನೆ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಅವರು ಧೃತಿಗೆಡದೆ ಮಾಧ್ಯಮದ ಮುಂದೆ ಮಾತನಾಡಿರುವ ಮಾತುಗಳು ದುಖದ ನಡುವೆಯೂ ಮೆಚ್ಚುಗೆಗೆ ಒಳಗಾಗಿದೆ. ದೊಡ್ಡಮನೆಯ ದೊಡ್ಡತನಕ್ಕೆ ಮತ್ತೊಂದು ನಿದರ್ಶನದಂತೆ ರಾಘಣ್ಣಾ ಮಾತಾಡಿದ್ದಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದಾರೆ.
ಹೌದು, ರಾಜ್‌ಕುಮಾರ್ ಕುಟುಂಬದ ಕಡೆ ಕುಡಿ ಕುಟುಂಬದ ಎಲ್ಲರ ಮುದ್ದಿನ ಮಗನಾಗಿದ್ದದು ಸತ್ಯ. ರಾಘವೇಂದ್ರ ಹಾಗೂ ಶಿವರಾಜ್‌ಕುಮಾರ್ ಅವರು ಪುನೀತ್ ರನ್ನು ತಮ್ಮ ಸಹೋದರನಿಗಿಂತಲೂ ಮಗನಂತೆ ಕಂಡವರು. ಮಗನಂತಹ ತಮ್ಮನನ್ನು ಕಳೆದುಕೊಂಡೂ ರಾಘಣ್ಣಾ ಸಂಯಮದಿಂದ ವರ್ತಿಸುವಂತೆ ಕೋರಿಕೊಂಡ ಸಂದೇಶ ಎಲ್ಲರ ಕಣ್ಣಂಚಲ್ಲಿ ನೀರು ತರುವಂತೆ ಮಾಡಿದೆ.

ನಮ್ಮ ಅಪ್ಪಾಜಿಯವರನ್ನು ಕಳಿಸಿಕೊಡುವಾಗ ಸಾಕಷ್ಟು ತೊಂದರೆಯಾಗಿದೆ. ನಮ್ಮ ಕುಟುಂಬದಿಂದ ಇನ್ನೊಂದು ಆತ್ಮ ನೋವುಣ್ಣಬಾರದು. ದಯವಿಟ್ಟು ಅಪ್ಪುವನ್ನು ಚೆನ್ನಾಗಿ ಕಳಿಸಿಕೊಡಬೇಕು ಎಂದು ಅಭಿಮಾನಿಗಳ ಪ್ರೀತಿಯ ರಾಘಣ್ಣಾ ಮನವಿ ಮಾಡಿಕೊಂಡಿದ್ದಾರೆ.
ಅವನಿಗಿಂತ (ಪುನೀತ್) ಮೊದಲು ನಾನು ಹೋಗಬೇಕಾಗಿತ್ತು, ಅವನೇ ನನ್ನನ್ನು ಎರಡೆರಡು ಬಾರಿ ಆಸ್ಪತ್ರೆಗಳಿಂದ ಬಚಾವ್ ಮಾಡಿ ಕರೆ ತಂದಿದ್ದ. ಆದರೆ, ನನಗೆ ಅವನನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸಾಧ್ಯವಾಗಲಿಲ್ಲ ಎಂದು ನಿರ್ಭಾವುಕರಾಗಿ ತಮ್ಮ ಅಸಹಾಯಕತೆ ತೋರಿಸಿಕೊಂಡರು.
ನನಗಿಂತ ಮೊದಲು ಅವನು ಹೋಗಿದ್ದಾನೆ, ಅಪ್ಪಾಜಿ ಹಾಗೂ ಅಮ್ಮನನ್ನು ನೋಡಿಕೊಳ್ಳಲು ನಾನು ಹೋಗುತ್ತೇನೆ, ನೀನು ನನ್ನ ಮಕ್ಕಳನ್ನು ನೋಡಿಕೊಂಡು ಇಲ್ಲೇ ಇರು ಎಂದು ಹೇಳಿ ಹೋಗಿದ್ದಾನೆ ಎಂದು ಹೇಳುವಾಗ ರಾಘವೇಂದ್ರ ಅವರ ನೋವು ಬಹಿರಂಗಪಡಿಸದಿದ್ದರೂ ಅವರಲ್ಲಿ ತುಂಬಿದ್ದ ಅಗಾಧ ನೋವು ಎದ್ದು ಕಾಣುತ್ತಿತ್ತು.
ತಮ್ಮನ ಮರಣದ ಸುದ್ದಿ ಆಘಾತದಂತೆ ಎರಗಿದರೂ, ಸಮಾಜಕ್ಕೆ ಏನೂ ತೊಂದರೆಯಾಗಕೂಡದು, ಅಭಿಮಾನಿಗಳು ಅತಿರೇಕದಿಂದ ವರ್ತಿಸಬಾರದು ಎಂದು ಸಂಯಮದಿಂದ ಬಂದು ಮಾತನಾಡಿದ ರಾಘವೇಂದ್ರ ಅವರ ಗಟ್ಟಿತನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ.

https://m.facebook.com/story.php?story_fbid=6347883795284064&id=100001875187700