ಕಳೆದ ಆರು ವರ್ಷಗಳಿಂದ ಭಾರತದ ರಾಜಕೀಯ ವಾಗ್ಬಾದಗಳ ಮುಖ್ಯ ವಿಷಯವಾಗಿರುವ ವಿವಾದಿತ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಭೂತ ಮತ್ತೊಮ್ಮೆ ಎದ್ದು ಕೂತಿದೆ.
ಭಾರತೀಯ ಸೇನೆಯ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದೇ ಬಣ್ಣಿಸಲಾಗಿರುವ 36 ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಸಜ್ಜಿತ ಯುದ್ಧ ವಿಮಾನಗಳನ್ನು ಫ್ರಾನ್ಸ್ ಸರ್ಕಾರದಿಂದ ಖರೀದಿಸುವ 59 ಸಾವಿರ ಕೋಟಿ ರೂಪಾಯಿ ಮೊತ್ತದ ರಾಫೇಲ್ ಒಪ್ಪಂದ ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ವಿವಾದದ ಕೇಂದ್ರವಾಗಿದೆ.

ವಾಸ್ತವವಾಗಿ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಎರಡನೇ ಅವಧಿಯಲ್ಲಿ ಪ್ರಸ್ತಾವನೆ ಹಂತದಲ್ಲಿದ್ದ ಈ ಒಪ್ಪಂದ, ಹಲವು ಸುತ್ತಿನ ಚೌಕಾಸಿ, ಷರತ್ತುಗಳ ಹಗ್ಗಜಗ್ಗಾಟದಿಂದ ನೆನಗುದಿಗೆ ಬಿದ್ದಿತ್ತು. ಆಗ ಈ ಖರೀದಿ ಯೋಜನೆಯನ್ನು ದುಬಾರಿ ಒಪ್ಪಂದ ಎಂಬ ಕಾರಣಕ್ಕೆ ವಿರೋಧಿಸಿದ್ದ ಬಿಜೆಪಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಸ್ಚತಃ ಮೋದಿಯವರೇ ದಿಢೀರನೇ ಒಪ್ಪಂದವನ್ನು ಅಂತಿಮಗೊಳಿಸಿದ್ದರು. 2015ರಲ್ಲಿ ತಮ್ಮ ಫ್ರಾನ್ಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ದಿಢೀರನೇ ಈ ಸಾವಿರಾರು ಕೋಟಿ ರೂ ಒಪ್ಪಂದವನ್ನು ಏಕಪಕ್ಷೀಯವಾಗಿ ಅಂತಿಮಗೊಳಿಸಿದ್ದರು.
ಹಾಗೆ ನೋಡಿದರೆ ಮೋದಿಯವರ ಆಗಿನ ಫ್ರಾನ್ಸ್ ಪ್ರವಾಸದ ಅಧಿಕೃತ ಕಾರ್ಯಕ್ರಮ ಪಟ್ಟಿಯಲ್ಲಿ ಕೂಡ ಈ ಒಪ್ಪಂದದ ಕುರಿತ ಮಾತುಕತೆಯ ಪ್ರಸ್ತಾಪವೇ ಇರಲಿಲ್ಲ. ಅಂದಿನ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರಿಗೆ ಮತ್ತು ರಕ್ಷಣಾ ಖರೀದಿ ಕುರಿತ ಸಂಸದೀಯ ಸಮಿತಿಗೆ ಕೂಡ ಮೋದಿಯವರು ಒಪ್ಪಂದ ಅಂತಿಮಗೊಳಿಸುವ ಮಾಹಿತಿ ಇರಲಿಲ್ಲ. ನಿಯಮದಂತೆ ಸಮಿತಿಯ ಅನುಮತಿ ಪಡೆಯುವ ಮತ್ತು ರಕ್ಷಣಾ ಸಚಿವರೊಂದಿಗಿನ ಸಮಾಲೋಚನೆಯ ಗೋಜಿಗೆ ಪ್ರಧಾನಿ ಹೋಗಿರಲಿಲ್ಲ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಮನೋಹರ್ ಪಾರಿಕ್ಕರ್ ಅವರ ದಿಢೀರ್ ಸಾವು ಮತ್ತು ಹಾಸಿಗೆ ಹಿಡಿದಿದ್ದ ಅವರ ಬಳಿ ಇತ್ತೆನ್ನಲಾದ ರಹಸ್ಯ ಕಡತದ ಕುರಿತ ವರದಿಗಳು ಕೂಡ ರಾಫೇಲ್ ಡೀಲ್ ವಿಷಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಹೇಳಿದ್ದವು.
ಇದೀಗ ಭಾರತ ಮತ್ತು ಫ್ರಾನ್ಸ್ ನಡುವಿನ ಅಂತರ್ ಸರ್ಕಾರಿ ರಕ್ಷಣಾ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗಳು ಭಾರೀ ಕಿಕ್ ಬ್ಯಾಕ್ ಪಡೆದಿದ್ದಾರೆ ಮತ್ತು ಮಧ್ಯವರ್ತಿಗಳ ಪಾಲುಗಾರಿಕೆಯಿಂದಾಗಿ ಒಪ್ಪಂದ ನ್ಯಾಯಸಮ್ಮತವಾಗಿ, ಪಾರದರ್ಶಕವಾಗಿ ಆಗಿಲ್ಲ ಎಂಬುದು ತನಿಖೆಯಿಂದ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಫ್ರೆಂಚ್ ಸರ್ಕಾರ ಪ್ರಕರಣದ ವಿಚಾರಣೆಗೆ ನ್ಯಾಯಾಧೀಶರನ್ನು ನೇಮಿಸಿದೆ.

ಆ ಮೂಲಕ ಒಪ್ಪಂದದ ಕುರಿತ ಪ್ರತಿಪಕ್ಷಗಳು, ಮಾಧ್ಯಮಗಳು, ದೇಶದ ಖ್ಯಾತ ವಕೀಲರು, ಹೋರಾಟಗಾರರು ಎತ್ತಿದ ಪ್ರಶ್ನೆಗಳಿಗೆ, ಅನುಮಾನಗಳಿಗೆ ಪರೋಕ್ಷ ಸಮರ್ಥನೆ ಸಿಕ್ಕಂತಾಗಿದೆ. ಅದೇ ಹೊತ್ತಿಗೆ ಈ ಒಪ್ಪಂದದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ಸಿಎಜಿ ಮತ್ತು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳ ಕುರಿತ ಮತ್ತೊಂದು ಸುತ್ತಿನ ಸಾರ್ವಜನಿಕ ಚರ್ಚೆಗೂ ಒಪ್ಪಂದದ ಕುರಿತ ಈ ಹೊಸ ಬೆಳವಣಿಗೆ ತಿದಿಯೊತ್ತಿದೆ.
ಬಹಳ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೇನೆಂದರೆ, 59 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಈ ರಕ್ಷಣಾ ಖರೀದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ದೇಶದ ಹಿತಾಸಕ್ತಿ ಬಲಿಕೊಟ್ಟು ಅಧಿಕಾರಸ್ಥರು ಮತ್ತು ಅವರ ಆಪ್ತರ ವ್ಯವಹಾರಿಕ ಹಿತಾಸಕ್ತಿಗಳನ್ನು ಕಾಪಾಡಲಾಗಿದೆ ಎಂಬ ಗಂಭೀರ ಅರೋಪಗಳನ್ನು ಒಳಗೊಂಡಿದ್ದ ಪ್ರಕರಣವನ್ನು ತಳ್ಳಿಹಾಕಿದ್ದ ಸುಪ್ರೀಂಕೋರ್ಟಿನ ಅಂದಿನ ಮುಖ್ಯನ್ಯಾಯಮೂರ್ತಿಗಳು, ತಮ್ಮ ನಿವೃತ್ತಿಯ ಬಳಿಕ ಅದೇ ಸರ್ಕಾರದಿಂದ ರಾಜ್ಯಸಭೆಗೆ ನೇಮಕಗೊಂಡ ವಿದ್ಯಮಾನದ ಹಿನ್ನೆಲೆಯಲ್ಲೂ ಇಡೀ ರಾಫೇಲ್ ಒಪ್ಪಂದದ ಕುರಿತ ಚರ್ಚೆ ಹೊಸ ಆಯಾಮ ತೆಗೆದುಕೊಂಡಿದೆ.
ಒಪ್ಪಂದದ ಕುರಿತು ತನಿಖೆಗೆ ಆದೇಶಿಸುವಂತೆ ಕೋರಿ, ಸ್ವತಃ ಅಡಳಿತ ಪಕ್ಷ ಬಿಜೆಪಿಯ ಹಿರಿಯ ನಾಯಕರಾಗಿದ್ದ ಯಶವಂತ ಸಿನ್ಹಾ, ಹಿರಿಯ ಪತ್ರಕರ್ತ ಅರುಣ್ ಶೌರಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು 2019ರ ನವೆಂಬರಿನಲ್ಲಿ ತಳ್ಳಿಹಾಕಿದ್ದ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಅಂದಿನ ಸಿಜೆಐ, ಈ ಮಹತ್ವದ ತೀರ್ಪು ನೀಡಿದ ಕೆಲವೇ ತಿಂಗಳಲ್ಲಿ ಅದೇ ಸರ್ಕಾರ ನೀಡಿದ ಲಾಭದಾಯಕ ಹುದ್ದೆಯನ್ನು ಸ್ವೀಕರಿಸಿದ್ದು ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಒಂದು ದೊಡ್ಡ ಕಪ್ಪು ಚುಕ್ಕೆ ಎಂಬ ಮಾತುಗಳೂ ಕೇಳಿಬಂದಿದ್ದವು.
ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಬಿದ್ದು ಹೋದರೂ ಆಡಳಿತರೂಢ ಬಿಜೆಪಿ ಪಕ್ಷ, ಪ್ರಧಾನಿ ಮೋದಿ ಅವರ ಪಾರದರ್ಶಕ, ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತ ನೀಡುವುದಾಗಿ ಚುನಾವಣೆಯಲ್ಲಿ ‘ಮೈ ಹೂಂ ಚೌಕಿದಾರ್’ ಘೋಷಣೆಯ ವಾಗ್ದಾನ ಮಣ್ಣುಪಾಲಾಗಿತ್ತು. ‘ಚೌಕಿದಾರ್ ಚೋರ್ ಹೈ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಟೀಕೆ ತೀರಾ ಆಧಾರರಹಿತವೇನಲ್ಲ ಎಂಬುದು ಕೂಡ ನಿವೃತ್ತ ಸಿಜೆಐ ಅವರ ರಾಜ್ಯಸಭಾ ನೇಮಕ ಸಾರಿ ಹೇಳಿತ್ತು.
ಜೊತೆಗೆ, ಒಪ್ಪಂದದ ಬಗ್ಗೆ ನ್ಯಾಯಾಲಯದ ಮುಂದೆ ಎತ್ತಿದ ಪ್ರಶ್ನೆಗಳಿಗೆ, ಅನುಮಾನಗಳಿಗೆ ಸಾಕ್ಷ್ಯಾಧಾರಗಳ ಸಹಿತ ಉತ್ತರ ನೀಡುವ ಬದಲು ಸರ್ಕಾರ ಮತ್ತು ಬಿಜೆಪಿ ಪಕ್ಷ ಪದೇ ಪದೇ ದೇಶಭಕ್ತಿ, ದೇಶ ನಿಷ್ಠೆಯ ವಿಷಯವನ್ನು ಮುಂದುಮಾಡಿ ಈ ಪ್ರಕರಣದ ಬಗ್ಗೆ ಪ್ರಶ್ನಿಸಿದವರನ್ನು ದೇಶದ್ರೋಹದ ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದು ಕೂಡ ಅನುಮಾನಗಳಿಗೆ ಪುಷ್ಟಿ ನೀಡಿತ್ತು.
ಅಲ್ಲದೆ, ಪ್ರಕರಣದ ವಿಚಾರಣೆಯ ವೇಳೆ ಒಪ್ಪಂದದ ಕುರಿತು ಮಹತ್ವದ ದಾಖಲೆಗಳು ಕಳುವಾಗಿವೆ ಎಂದು ನ್ಯಾಯಾಲಯಕ್ಕೆ ಹೇಳುವ ಮೂಲಕ ಸ್ವಯಂಘೋಷಿತ ‘ಚೌಕಿದಾರ್’ ಮೋದಿಯವರ ಸರ್ಕಾರ,:ರಕ್ಷಣಾ ಖರೀದಿ ಒಪ್ಪಂದದಂತಹ ಅತ್ಯಂತ ಸೂಕ್ಷ್ಮ ಮತ್ತು ಗೌಪ್ಯ ಸಂಗತಿಯ ವಿಷಯದಲ್ಲಿ ತಾನೆಷ್ಟು ಹೊಣೆಗೇಡಿಯಾಗಿದ್ದೇನೆ ಎಂಬುದನ್ನು ಜಗಜ್ಜಾಹೀರು ಮಾಡಿತ್ತು.
ನ್ಯಾಯಾಲಯದ ವಿಚಾರಣೆ, ಸರ್ಕಾರದ ಸಮರ್ಥನೆ, ಪ್ರತಿವಾದಿಗಳ ಕಾನೂನು ಹೋರಾಟ, ಪ್ರತಿಪಕ್ಷಗಳ ವಾಗ್ವಾದಗಳ ನಡುವೆಯೂ ಸುಪ್ರೀಂಕೋರ್ಟಿನ 2019ರ ನವೆಂಬರ್ ತೀರ್ಪಿನ ಬಳಿಕ ಬಹುತೇಕ ಕಳೆದ ಎರಡು ವರ್ಷಗಳಿಂದ ಈ ಪ್ರಕರಣ ತೆರೆಮರೆಗೆ ಸರಿದೇ ಬಿಟ್ಟಿತ್ತು. ಆದರೆ ಇದೀಗ, ಒಪ್ಪಂದದ ಮತ್ತೊಂದು ಪಾಲುದಾರ ಮತ್ತು ರಾಫೆಲ್ ಯುದ್ಧವಿಮಾನಗಳ ಸರಬರಾಜುದಾರ ಫ್ರೆಂಚ್ ಸರ್ಕಾರ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ. ಮಧ್ಯವರ್ತಿಗಳು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತನಿಖೆಗಾಗಿ ನ್ಯಾಯಾಧೀಶರನ್ನು ನೇಮಿಸುವ ಮೂಲಕ ರಾಫೆಲ್ ಭೂತ ಮತ್ತೊಮ್ಮೆ ಎದ್ದು ಕೂತಿದೆ.

ವಿಪರ್ಯಾಸ ಎಂದರೆ, ‘ತಾನೂ ತಿನ್ನುವುದಿಲ್ಲ. ಬೇರೆಯವರೂ ತಿನ್ನಲು ಬಿಡುವುದಿಲ್ಲ’ ಎಂಬಂಥ ದೊಡ್ಡದೊಡ್ಡ ಮಾತುಗಳನ್ನು ಆಡಿ ಚುನಾವಣಾ ಪ್ರಚಾರದ ವೇಳೆ, ಜನರಿಗೆ ಪ್ರಾಮಾಣಿಕ ಮತ್ತು ಪಾರದರ್ಶಕ ಸರ್ಕಾರ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ, ತಮ್ಮದೇ ಅತ್ಯಾಸಕ್ತಿಯ ರಾಫೇಲ್ ಒಪ್ಪಂದದ ಕುರಿತ ಈ ಹೊಸ ಬೆಳವಣಿಗೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ!
ಒಪ್ಪಂದದ ಕುರಿತು ಫ್ರೆಂಚ್ ಸರ್ಕಾರ, ತನಿಖೆಗೆ ಆದೇಶಿಸಿ ಬರೋಬ್ಬರಿ ಮೂರು ದಿನಗಳು ಕಳೆದರೂ ಈವರೆಗೂ ಪ್ರಧಾನಿಯಾಗಲೀ, ಸಂಬಂಧಪಟ್ಟ ರಕ್ಷಣಾ ಸಚಿವರಾಗಲೀ ಅಥವಾ ಅಧಿಕೃತವಾಗಿ ಸರ್ಕಾರದ ಯಾವುದೇ ಪ್ರತಿನಿಧಿಯಾಗಲೀ ಆ ಬಗ್ಗೆ ಬಾಯಿಬಿಟ್ಟಿಲ್ಲ !
ಅಷ್ಟೇ ಅಲ್ಲ; ಎರಡು ಸರ್ಕಾರಗಳ ನಡುವಿನ ಅಧಿಕೃತ ಒಪ್ಪಂದದ ಕುರಿತು ಒಪ್ಪಂದದ ಭಾಗವಾಗಿದ್ದ ಒಂದು ಸರ್ಕಾರ ಅವ್ಯವಹಾರದ ಕುರಿತು ತನಿಖೆಗೆ ಮುಂದಾದಾಗ ಕೂಡ, ಅದೇ ಒಪ್ಪಂದದ ಭಾಗವಾದ ಇನ್ನೊಂದು ಸರ್ಕಾರ ಈವರೆಗೂ ಅಂತ ಬೆಳವಣಿಗೆಯ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂಬುದೇ ಹಲವು ಸಂಗತಿಗಳನ್ನು ಸೂಚಿಸುತ್ತಿದೆ.
ಈವರೆಗೆ ರಾಫೇಲ್ ಕುರಿತ ಫ್ರೆಂಚ್ ಸರ್ಕಾರದ ತನಿಖೆಯ ಬಗ್ಗೆ ಆಡಳಿತ ವ್ಯವಸ್ಥೆಯ ಕಡೆಯಿಂದ ಬಿಜೆಪಿ ವಕ್ತಾರರು ಮತ್ತು ಕೆಲ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಆಡಳಿತ ಪಕ್ಷವಾಗಿ ಬಿಜೆಪಿಯ ಅಂತಹ ಪ್ರತಿಕ್ರಿಯೆ ನಿರೀಕ್ಷಿತವೇ. ಆದರೆ ಅದು ಆ ಪಕ್ಷದ ಪ್ರತಿಕ್ರಿಯೆಯೇ ವಿನಃ ಸರ್ಕಾರದ್ದಲ್ಲ. ಒಪ್ಪಂದದ ಭಾಗವಾದ ಮತ್ತು ಫ್ರೆಂಚ್ ಸರ್ಕಾರ ಆದೇಶಿಸಿರುವ ತನಿಖೆಯ ಪರಿಣಾಮಗಳನ್ನು ಎದುರಿಸಬೇಕಾದ ಭಾರತ ಸರ್ಕಾರವಾಗಲೀ, ಸ್ವತಃ ಸರ್ಕಾರದ
ಮುಖ್ಯಸ್ಥರಾದ ಪ್ರಧಾನಿಯಾಗಲಿ ಅಥವಾ ಒಪ್ಪಂದದ ಭಾಧ್ಯಸ್ಥರಾದ ರಕ್ಷಣಾ ಸಚಿವರಾಗಲಿ ಕಳೆದ 48 ಗಂಟೆಗಳಲ್ಲಿ ಈ ಬೆಳವಣಿಗೆಯ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನಾಗಲೀ, ಪ್ರತಿಕ್ರಿಯೆಯನ್ನಾಗಲಿ ನೀಡಿಲ್ಲ ಎಂಬುದು ಗಮನಾರ್ಹ.
ಆ ಹಿನ್ನೆಲೆಯಲ್ಲಿ ಹೇಳುವುದಾದರೆ, ಅತ್ತ ಫ್ರೆಂಚ್ ಸರ್ಕಾರ ರಾಫೆಲ್ ಒಪ್ಪಂದದ ಅವ್ಯವಹಾರ ಕುರಿತು ತನಿಖೆಗೆ ನ್ಯಾಯಾಧೀಶರನ್ನು ನೇಮಕ ಮಾಡಿದ ಬೆಳವಣಿಗೆ ನಿಜಕ್ಕೂ ಭಾರತದ ರಕ್ಷಣಾ ಸಬಲೀಕರಣದ ಪ್ರಯತ್ನಗಳಿಗೆ ದೊಡ್ಡ ಹಿನ್ನಡೆಯೇ. ಹಾಗೆಯೇ ಈ ಮೊದಲು ಈ ವಿಷಯದಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ದೇಶದ ಪ್ರಜ್ಞಾವಂತ ನಾಯಕರು, ಹೋರಾಟಗಾರರು, ವಕೀಲರು, ಪತ್ರಕರ್ತರು ಎತ್ತಿದ ಪ್ರಶ್ನೆಗಳಿಗೆ ಫ್ರೆಂಚ್ ಸರ್ಕಾರದ ಈಗಿನ ಈ ತನಿಖೆಯ ಕ್ರಮ ಇಂಬು ನೀಡಿದೆ.
ವಾಸ್ತವವಾಗಿ, ಯುಪಿಎ-2 ಸರ್ಕಾರ ಒಪ್ಪಿಕೊಂಡಿದ್ದ ವಿಮಾನ ದರಕ್ಕಿಂತ ಶೇಕಡ ನೂರರಷ್ಟು ಅಧಿಕ ದರಕ್ಕೆ ಪ್ರಧಾನಿ ಮೋದಿಯವರು ಖರೀದಿ ಒಪ್ಪಂದ ಮಾಡಿಕೊಂಡಿದ್ದಾರೆ ಮತ್ತು ಮುಖ್ಯವಾಗಿ ದೇಶದ ಹೆಚ್ಎಎಲ್ ನಂತಹ ಸಾರ್ವಜನಿಕ ವಲಯದ ಕಂಪನಿ ಯುದ್ಧವಿಮಾನಗಳ ತಯಾರಿಕೆಯಲ್ಲಿ ಸಹ ಪಾಲುದಾರನಾಗಿ ಪಾಲ್ಗೊಳ್ಳುವ ಅವಕಾಶವನ್ನು ಕೂಡ ಮೋದಿಯವರು ತಪ್ಪಿಸಿದ್ದಾರೆ. ಜೊತೆಗೆ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಉದ್ಯಮಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಕಂಪನಿಗೆ ಫ್ರೆಂಚ್ ರಾಫೆಲ್ ಕಂಪನಿಯೊಂದಿಗೆ ಸಹವರ್ತಿಯಾಗಿ
ಭಾಗಿಯಾಗುವ ಅವಕಾಶ ನೀಡುವ ಮೂಲಕ ಪ್ರಧಾನಿ ಮೋದಿ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂಬುದು ಪ್ರತಿಪಕ್ಷಗಳ ಪ್ರಮುಖ ಆರೋಪವಾಗಿತ್ತು.
ಇದೀಗ ಪ್ರೆಂಚ್ ಸರ್ಕಾರ ಇಡೀ ವ್ಯವಹಾರದಲ್ಲಿ ಮಧ್ಯವರ್ತಿಗಳ ಪಾತ್ರದ ಕುರಿತು ತನಿಖೆಗೆ ಆದೇಶಿಸಿರುವುದು ಪ್ರತಿಪಕ್ಷಗಳು ಈ ಹಿಂದೆ ಮಾಡಿದ್ದ ಆರೋಪಗಳಿಗೆ ಪುಷ್ಟಿ ನೀಡಿದೆ.
ಅದೇ ಕಾರಣಕ್ಕೆ ಇದೀಗ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ರಾಫೇಲ್ ಒಪ್ಪಂದದ ಕುರಿತು ಮತ್ತೊಮ್ಮೆ ಎದ್ದುಕೂತಿವೆ. ಮುಖ್ಯವಾಗಿ ಫ್ರೆಂಚ್ ಸರ್ಕಾರ ಒಪ್ಪಂದದ ಕುರಿತು ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕೂಡ ಈ ಒಪ್ಪಂದದ ಕುರಿತು ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆ ನಡೆಸಬೇಕು ಮತ್ತು ಸ್ವತಃ ಪ್ರಧಾನಿ ಮೋದಿ ಈ
ಬೆಳವಣಿಗೆಗಳ ಕುರಿತು ಬಹಿರಂಗ ಹೇಳಿಕೆ ನೀಡಬೇಕು ಎಂದು ಒತ್ತಾಯಿಸತೊಡಗಿವೆ. ಆದರೆ ಅಂತಹ ಒತ್ತಾಯಗಳಿಗೆ ತಾರ್ಕಿಕ, ಸಾಕ್ಷ್ಯಾಧಾರ ಸಹಿತ ಪ್ರತ್ಯುತ್ತರ ಕೊಡುವ ಬದಲು ಬಿಜೆಪಿ, ಮತ್ತದೇ ದೇಶಭಕ್ತಿ, ನಿಷ್ಠೆಯ ಹುಸಿ ಪ್ರತ್ಯಸ್ತ್ರಗಳನ್ನೇ ಪ್ರಯೋಗಿಸುತ್ತಿದೆ.