ಮೈಸೂರು : ಕೆಪಿಸಿಸಿ ಕಾಯಾಧ್ಯಕ್ಷ ದಿವಂಗತ ಧ್ರುವನಾರಾಯಣ ಕುಟುಂಬಕ್ಕೆ ಆಘಾತಗಳ ಮೇಲೆ ಆಘಾತ ಬಂದೆರಗುತ್ತಿದೆ. ಕಳೆದ ತಿಂಗಳು ಅಂದರೆ ಮಾರ್ಚ್ 11ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೃದಯಾಘಾತದಿಂದ ನಿಧನರಾಗಿದ್ದರು. ಈ ಘಟನೆ ಕಳೆದು ಒಂದು ತಿಂಗಳು ಮಾಸುವ ಮುನ್ನವೇ ಅವರ ಪತ್ನಿ ವೀಣಾ ಧ್ರುವನಾರಾಯಣ್ ಇಂದು ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಧ್ರುವ ನಾರಾಯಣ್ ಬದುಕಿದ್ದಾಗ ಪತ್ನಿಯ ಆರೋಗ್ಯದ ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದರು ಎನ್ನಲಾಗಿದೆ. ಪತ್ನಿಯ ಆರೈಕೆಯಲ್ಲಿ ತೊಡಗಿದ್ದ ಧ್ರುವ ನಾರಾಯಣ್ ಹಠಾತ್ ನಿಧನ ಹೊಂದಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರ ಪತ್ನಿ ಕೂಡ ಕೊನೆಯುಸಿರೆಳೆದಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಂಜನಗೂಡು ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವ ನಾರಾಯಣ್ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದರು. ಇವರ ನಿಧನದ ಬಳಿಕ ಕಾಂಗ್ರೆಸ್ ನಂಜನಗೂಡು ಕ್ಷೇತ್ರದ ಟಿಕೆಟ್ನ್ನು ಅಲ್ಲಿನ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಪುತ್ರ ದರ್ಶನ್ ಧ್ರುವ ನಾರಾಯಣ್ಗೆ ನೀಡಿತ್ತು. ಪುತ್ರನ ರಾಜಕೀಯ ಬೆಳವಣಿಗೆಯನ್ನು ನೋಡಬೇಕಿದ್ದ ಪೋಷಕರು ಕೇವಲ ಒಂದು ತಿಂಗಳ ಅಂತರದಲ್ಲಿ ಬಾರದ ಲೋಕಕ್ಕೆ ತೆರಳಿದ್ದು ದುರಂತವೇ ಸರಿ.






