ಚಾಮರಾಜನಗರ : ದಿಢೀರ್ ಹೃದಯಾಘಾತದಿಂದ ಮೃತಪಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಅಂತಿಮ ದರ್ಶನಕ್ಕೆ ರಾಜಕೀಯ ನಾಯಕರು ಸೇರಿದಂತೆ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಧ್ರುವ ನಾರಾಯಣ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸರತಿ ಸಾಲಿನಲ್ಲಿ ಬಂದ ಜನರು ಧ್ರುವ ನಾರಾಯಣರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.
ಧ್ರುವ ನಾರಾಯಣ ಅಂತ್ಯಕ್ರಿಯೆಗೆ ಅವರ ಹುಟ್ಟೂರು ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಇದೇ ಗ್ರಾಮದಲ್ಲಿರುವ ಧ್ರುವ ನಾರಾಯಣ್ ಜಮೀನಿನಲ್ಲಿ ಅವರ ತಂದೆಯ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ. ರಾಜಕೀಯ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಧ್ರುವ ನಾರಾಯಣ್ ಈ ಜಮೀನಿನಲ್ಲಿ ಕಾಲ ಕಳೆಯುತ್ತಿದ್ದರು .
ಹೀಗಾಗಿ ಅವರ ಇಷ್ಟದ ತೋಟದಲ್ಲಿಯೇ ಅವರ ಅಂತ್ಯಕ್ರಿಯೆಯನ್ನು ನಡೆಸಲು ನಿರ್ಧರಿಸಲಾಗಿದೆ. ಅಂತ್ಯಕ್ರಿಯೆ ನಡೆಸುವ ಸ್ಥಳವನ್ನು ಚಾಮರಾಜನಗರ ಎಸ್ಪಿ ಪದ್ಮಿನಿ ಸಾಹೋ ಈಗಾಗಲೇ ಪರಿಶಿಲೀಸಿದ್ದಾರೆ. ಎಸ್ಪಿ ಪರಿಶೀಲನೆ ಬಳಿ ಧ್ರುವ ನಾರಾಯಣ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ .
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ನಿಧನಕ್ಕೆ ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಸಂತಾಪ ಸೂಚಿಸಿದ್ದಾರೆ. ಧ್ರುವ ನಾರಾಯಣ ಚಾಮರಾಜನಗರ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಅವರ ಅಕಾಲಿಕ ನಿಧನ ಚಾಮರಾಜನಗರ ಭಾಗದ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾರೆ.