ಬಿಬಿಎಂಪಿ ಚುನಾವಣೆಗೆ ನಾವು ಹೆದರಲ್ಲ, ಎದುರಿಸ್ತೀವಿ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವಿಳಂಬ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆ ತಡೆ ಹಿಡಿಯದೇ ಕೂಡಲೇ ನಡೆಸುವಂತೆ ಆದೇಶಿಸಿದೆ ಎಂದರು.
ಕರ್ನಾಟಕದ ಅರ್ಜಿ ಕೂಡ ಸುಪ್ರೀಂಕೋರ್ಟ್ ಮುಂದಿದ್ದು, ಅದರ ವಿಚಾರಣೆ ನಡೆದಿದೆ. ಅದರ ನಡುವೆ ಈ ತೀರ್ಪು ಬಂದಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಆದರೆ ಚುನಾವಣೆ ಘೋಷಣೆ ವಿಷಯ ಚುನಾವಣಾಧಿಕಾರಿಗೆ ಸಂಬಂಧಿಸಿದ್ದೇ ಹೊರತು ಸರಕಾರಕ್ಕೆ ಅಲ್ಲ ಎಂದರು.
ಬಿಜೆಪಿ ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ ಹೊರತು ಹೆದರಿಕೆ ಇಲ್ಲ. ಬಿಬಿಎಂಪಿ ಚುನಾವಣೆ ನಡೆಸುವುದಾದರೆ ಹಿಂದೂಳಿದ ವರ್ಗ, ಮಹಿಳೆ ಮತ್ತು ಎಸ್ಸಿ/ಎಸ್ಟಿ ಮೀಸಲು ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಸುಪ್ರೀಂಕೋರ್ಟ್ ಕೂಡ ಈ ಹಿಂದೆ ಚುನಾವಣೆ ನಡೆದ ವಾರ್ಡ್ ಗಳಷ್ಟೇ ಚುನಾವಣೆ ನಡೆಸಲು ಸೂಚಿಸಿದೆ ಎಂದು ಅಶೋಕ್ ಹೇಳಿದರು.