ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶ(Winter Session 2025) ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದ ಹಿನ್ನೆಲೆಯಲ್ಲಿ ಇಂದಿನ ಅಧಿವೇಶ ಮುಂದೂಡಲಾಗಿದೆ.

ಈ ಬೆನ್ನಲ್ಲೇ ಇದೀಗ ಅಧಿವೇಶನವನ್ನು ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ಕೋರಿ ವಿಪಕ್ಷ ನಾಯಕ ಆರ್. ಅಶೋಕ್ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ಕೋರಿ ಸನ್ಮಾನ್ಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಅವರಿಗೆ ಪತ್ರ ಮುಖೇನ ಮನವಿ ಮಾಡಿದ್ದೇನೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವ ಹಲವು ಗಂಭೀರ ವಿಷಯಗಳಿಗೆ ಮುಖ್ಯಮಂತ್ರಿಗಳು ಮತ್ತು ಸಚಿವರು ಇನ್ನೂ ಉತ್ತರ ನೀಡಬೇಕಿದೆ. ಇದರ ಜೊತೆಗೆ ರಾಜ್ಯದಲ್ಲಿ ಕುಸಿದಿರುವ ಕಾನೂನು ಸುವ್ಯವಸ್ಥೆ, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುದಾನ ಬಳಕೆಯ ಕಳಪೆ ಸಾಧನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲು ಮಾನ್ಯ ಸದಸ್ಯರುಗಳಿಗೆ ಇನ್ನೂ ಸಾಕಷ್ಟು ಸಮಯಾವಕಾಶದ ಅಗತ್ಯವಿದೆ. ಈ ನಿಟ್ಟಿನಲ್ಲಿ ನನ್ನ ಮನವಿಯನ್ನು ಪರಿಗಣಿಸಿ, ಸನ್ಮಾನ್ಯ ಸಭಾಧ್ಯಕ್ಷರು ವಿಧಾನಮಂಡಲದ ಅಧಿವೇಶನವನ್ನು ಒಂದು ವಾರಗಳ ವಿಸ್ತರಣೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.






