ಪುತ್ತೂರಿನಲ್ಲಿ ಮಾಜಿ ಸಿಎಂ ಸದಾನಂದ ಗೌಡ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶೃದ್ಧಾಂಜಲಿ ಬ್ಯಾನರ್ ಹಾಕಿ, ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಚಿತ್ರ ಹಿಂಸೆ ನೀಡಿರುವ ಘಟನೆ ಕುರಿತು ಪರೋಕ್ಷವಾಗಿ ಸಂಸದ ಪ್ರತಾಪ ಸಿಂಹ ಟೀಕಿಸಿದ್ದಾರೆ.
ಪಕ್ಷ ಸೋತಾಗ ನಾಯಕರ ಮೇಲೆ ಸಿಟ್ಟು ಹೊರ ಹಾಕುವ ಹಕ್ಕು ಕಾರ್ಯಕರ್ತರಿಗಿದೆ ಇದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
“ನಮ್ಮ ಪರವಾಗಿ ಮತ ಕೇಳುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗು ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ. ಪಕ್ಷ ಸೋತು ಅನಾಥವಾಗಿರುವುದು, ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ” ಎಂದು ಹೇಳಿದ್ದಾರೆ.
“ಯಾರದ್ದೋ ವೈಯ್ಯಕ್ತಿಕ ಮಹತ್ವಾಕಾಂಕ್ಷೆಯಿಂದ ಸೃಷ್ಟಿಯಾಗುವ ಷಡ್ಯಂತ್ರಕ್ಕೆ ಬಲಿಯಾಗುವುದು, ಯಾರ್ಯಾರನ್ನೋ ತೆಗಳುವುದು ಬೇಡ” ಎಂದು ಕಾರ್ಯಕರ್ತರಿಗೆ ಕರೆ ನೀಡಿರುವ ಅವರು, ಕಾರ್ಯಕರ್ತರಲ್ಲಿ ಕ್ಷಮೆಯನ್ನೂ ಕೇಳಿದ್ದಾರೆ.
ರಾಜ್ಯದಲ್ಲಿ ಹಾಗೂ ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಕಾರಣ ಎಂದು ಕೆಲವು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು. ಮಾಜಿ ಸಿಎಂ ಡಿವಿ ಸದಾನಂದ ಗೌಡ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರ ಇರುವ ಶೃದ್ಧಾಂಜಲಿ ಪೋಸ್ಟರ್ ಹಾಕಿ, ಚಪ್ಪಲಿ ಹಾರ ಹಾಕಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕಾರ್ಯಕರ್ತರಿಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್ ಕೊಟ್ಟಿದ್ದು, ನಡೆಯಲೂ ಆಗದಂತೆ ಥಳಿಸಿದ್ದಾರೆ. ಇದು ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.