-ಕೃಷ್ಣಮಣಿ
ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆಲುವು ಸಾಧಿಸುವ ಬಗ್ಗೆ ಬಿಜೆಪಿ ನಾಯಕರು ಆತ್ಮವಿಶ್ವಾಸದಿಂದ ಹೇಳುವುದು ನಿಶ್ಚಿತ. ಆದರೆ ಕಳೆದ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿಯಾಗಿ ಸೋಲಿಗೆ ಕಾರಣ ಆಗಿದ್ದು ಅರುಣ್ ಪುತ್ತಿಲ ಎಂಬ ಸಂಘಪರಿವಾರದ ನಾಯಕ. ಇದೀಗ ಲೋಕಸಭಾ ಚುನಾವಣೆಗೂ ಅರುಣ್ ಪುತ್ತಿಲ ಬಿಜೆಪಿ ಟಿಕೆಟ್ಗೆ ಆಕಾಂಕ್ಷಿ ಆಗಿದ್ದರು. ಆದರೆ ಬಿಜೆಪಿ ಪಕ್ಷದಿಂದ ಅವಮಾನ ಆಗಿದೆ ಎನ್ನುವ ಕಾರಣಕ್ಕೆ ಪುತ್ತೂರು ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಷರತ್ತು ಇಟ್ಟಿದ್ದರು. ಆದರೆ ಪುತ್ತಿಲ ಕ್ಷಮೆ ಕೇಳಬೇಕು ಎಂದು ಬಿಜೆಪಿ ನಾಯಕರು ಷರತ್ತು ಹಾಕಿದ್ದು, ಪಕ್ಷ ಸೇರ್ಪಡೆಗೆ ಅಡ್ಡಿಯಾಗಿತ್ತು. ಅದೇ ಕಾರಣದಿಂದ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿಯುವ ಸವಾಲು ಎಸೆದಿದ್ದರು. ಇದೀಗ ಪುತ್ತಿಲ ಪರಿವಾರ ಒಡೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ.
ಪುತ್ತಿಲ ಪರಿವಾರದಲ್ಲಿ ಒಡಕು ಮೂಡಿದ್ದು, ಪರಿವಾರದ ಪ್ರಮುಖ ಮುಖಂಡ ಪುತ್ತಿಲ ಪರಿವಾರದಿಂದ ಹೊರಕ್ಕೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿವಾರದಿಂದ ಹೊರಬಂದ ವಿಚಾರ ಹಂಚಿಕೊಂಡಿರುವ ಮುಖಂಡ ರಾಜಾರಾಮ್ ಭಟ್, ಪುತ್ತಿಲ ಪರಿವಾರದಿಂದ ಹೊರಬಂದಿದ್ದೇನೆ ಎಂದಿದ್ದಾರೆ. ಪುತ್ತಿಲ ಪರಿವಾರದ ಪ್ರಮುಖ ಆಧಾರ ಸ್ತಂಭವಾಗಿದ್ದ ರಾಜಾರಾಮ್ ಭಟ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದೆ, ಕಾಯಾ, ವಾಚಾ, ಮನಸಾ, ಪರಿವಾರದ ಪರವಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ಸಭೆ ಸಮಾರಂಭಗಳಿಗೆ ಸಹಾಯ ಮಾಡಿದ್ದೇನೆ. ರಾಜಕೀಯ ಮಾಡಬೇಕು ಎನ್ನುವ ಉದ್ದೇಶಕ್ಕೆ ನಾನು ಪರಿವಾರಕ್ಕೆ ಬಂದಿಲ್ಲ ಎಂದಿದ್ದಾರೆ.
ಮಾತೃ ಪಕ್ಷ ಬಿಜೆಪಿಯಲ್ಲಿ ವ್ಯವಸ್ಥೆ ಸರಿಯಿಲ್ಲ, ಸರಿಮಾಡಬೇಕು ಎನ್ನುವ ಕಾರಣಕ್ಕೆ ಪರಿವಾರಕ್ಕೆ ಬಂದಿದ್ದೆ. ಆ ಮೂಲಕ ಮತದಾರರಿಗೆ ನ್ಯಾಯ ಸಿಗಬೇಕು ಎಂದು ಪರಿವಾರ ಸಂಘಟನೆ ರಚನೆಯಾಯಿತು. ಅದರಲ್ಲಿ ಎಷ್ಟೋ ಜನರ ಹಿತ್ತಾಳೆ ಬುದ್ಧಿತನ ನಮಗೆ ಕಂಡು ಬಂತು. ದೊಡ್ಡ ನಾಯಕರ ದರಿದ್ರ ಮಾನಸಿಕತೆ ಕಂಡು ಬಂತು. ಆದರೆ ಪರಿವಾರದ ಒಳಗೆ ಇಳಿದ ನಂತರ ನಮಗೆ ಗೊತ್ತಾಯಿತು, ರಾಜಕೀಯ ಇಷ್ಟು ಹೊಲಸಾ ಎಂದು. ನಾನು ಯಾವುದೇ ನನ್ನ ಸ್ವಾರ್ಥ ಲಾಭಲ್ಕಾಗಿ ಈ ವ್ಯವಸ್ಥೆಯೊಳಗೆ ಗುರುತಿಸಿಕೊಂಡವನಲ್ಲ. ಆ ಕಾರಣಕ್ಕೆ ನಾನು ಎಲ್ಲಾ ಸಂಘಟನೆ, ಪರಿವಾರ, ಸಕ್ರೀಯ ರಾಜಕಾರಣದಿಂದ ಸಂಪೂರ್ಣ ನಿವೃತ್ತಿ ಪಡೆಯುತ್ತಿದ್ದೇನೆ. ಇವತ್ತಿನಿಂದ ನಾನು ಸ್ವತಂತ್ರ ಮತದಾರ. ನಾನು ಯಾವ ಪರಿವಾರದ, ಸಂಘಟನೆ ವಕ್ತಾರನಲ್ಲ. ನಾನು ಇನ್ನು ಮುಂದೆ ಪುತ್ತಿಲ ಪರಿವಾರದ ಸದಸ್ಯನಾಗಿರುವುದಿಲ್ಲ ಎಂದಿದ್ದಾರೆ.
ಪುತ್ತಿಲ ಪರಿವಾರದಲ್ಲಿ ರಾಜಕೀಯ ಮಾಡಿದರೂ ಗೆಲುವು ಸಾಧ್ಯವಿಲ್ಲ ಎನ್ನುವುದು ಅರುಣ್ ಕುಮಾರ್ ಪುತ್ತಿಲಗೂ ಗೊತ್ತಿದೆ. ಆದರೆ ಸಂಘಪರಿವಾರದಲ್ಲಿ ಅಷ್ಟು ವರ್ಷಗಳ ಕಾಲ ನಾನು ಸಂಘಟನೆ ಮಾಡಿಕೊಂಡು ಬಂದರೂ ಟಿಕೆಟ್ ನೀಡದ ಬಿಜೆಪಿಗೆ ತಿರುಗೇಟು ಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ. ಬಿ.ಎಲ್ ಸಂತೋಷ್ ಮೂಲಕ ಪಕ್ಷಕ್ಕೆ ಸೇರ್ಪಡೆ ಆಗುವ ಪ್ರಯತ್ನ ಮಾಡಿದರು, ಆದರೂ ಪ್ರಯೋಜನ ಆಗಲಿಲ್ಲ. ಈಗ ಪುತ್ತಿಲ ಗೆಲ್ಲದೆ ಇದ್ದರೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಭೀತಿಯನ್ನು ಸೃಷ್ಟಿಸಿದ್ದಾರೆ. ಹೀಗಾಗಿ ಪುತ್ತಿಲ ಪರಿವಾರದ ಒಬ್ಬೊಬ್ಬರೇ ಸದಸ್ಯರನ್ನು ಹೊರಕ್ಕೆ ಕಳುಹಿಸುವ ಕೆಲಸ ಮಾಡುತ್ತಿದ್ದು, ಚುನಾವಣೆಯಲ್ಲಿ ಸೋಲಿನ ಭೀತಿ ದೂರ ಮಾಡುವ ಪ್ರಯತ್ನ ಭಾರತೀಯ ಜನತಾ ಪಾರ್ಟಿಯದ್ದು ಎನ್ನಲಾಗ್ತಿದೆ.
ಕೃಷ್ಣಮಣಿ