ಮೈಸೂರು: ಯಕ್ಷಗಾನ ಕಲಾವಿದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿರುವ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಿವಾದ ಸೃಷ್ಟಿಸಿದೆ.

ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು. ಅಲ್ಲಿ ಅಂತಹ ಅನಿವಾರ್ಯತೆ ಇದೆ ಎಂದಿದ್ದಾರೆ.

ಯಕ್ಷಗಾನ ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದರಿಂದ, ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಸ್ತ್ರೀ ವೇಷಧಾರಿಗಳು ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು. ಒಂದು ವೇಳೆ ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗಭೂಮಿಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು ಎಂದಿದ್ದಾರೆ.

ಇನ್ನು ಕಲಾವಿದ ಕಲಾವಿದರ ನಡುವೆ ಸಂಬಂಧಕ್ಕೆ ಒಪ್ಪದಿದ್ದರೆ ಮುಂದಿನ ವರ್ಷ ಮೇಳ ಸಿಗುವುದಿಲ್ಲ, ಅದು ಅವರ ಬದುಕಿನ ಪ್ರಶ್ನೆ. ಮೇಳದಲ್ಲಿ ಅವಕಾಶ ಇಲ್ಲದೇ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು. ಆಗೆಲ್ಲಾ ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಹೀಗಾಗಿ ರಂಗಭೂಮಿ ಎದುರಿನಿಂದ ಕಾಣುವುದಕ್ಕಿಂದ ವಿಭಿನ್ನವಾಗಿದೆ ಎಂದಿದ್ದಾರೆ.










