ಬೀದರ್: ತಂದೆ ಇಲ್ಲದ ಮಕ್ಕಳಿಗೆ ವಾರ್ಷಿಕ ₹24 ಸಾವಿರ ಶಿಷ್ಯವೇತನ ಸಿಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶದ ಕುರಿತು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.
ಸಂದೇಶದಿಂದಾಗಿ ಜನರು ಜಿಲ್ಲಾಧಿಕಾರಿ, ತಹಶೀಲ್ದಾರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಸಂಪರ್ಕಿಸುತ್ತಿದ್ದಾರೆ.ಮಧ್ಯವರ್ತಿಗಳೂ ಅರ್ಜಿಗಾಗಿ ಗಲಾಟೆ ಮಾಡುತ್ತಿದ್ದಾರೆ. ಆದರೆ, ಆರ್ಥಿಕ ನೆರವಿನ ವಾಸ್ತವ ಬೇರೆಯೇ ಇದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಹಾಗೂ ತಿದ್ದುಪಡಿ 2021 ಕಲಂ 2ರ(58) ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಎರಡು ವರ್ಗಗಳಿವೆ. ಅದರಲ್ಲಿ 18 ವರ್ಷದ ಒಳಗಿನ ಮಕ್ಕಳನ್ನು ಮಕ್ಕಳ ಪಾಲನಾ ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ, ಕುಟುಂಬದ ವಾತಾವರಣದಲ್ಲಿ ಮುಂದುವರಿಸಲು ಬೆಂಬಲಿಸುವುದು ಮೊದಲನೆಯದ್ದು ಹಾಗೂ ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಶೋಷಣೆ, ಸಂಕಷ್ಟಕ್ಕೀಡಾಗುವುದನ್ನು ತಪ್ಪಿಸಿ ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯಲು ಬೆಂಬಲಿಸುವುದು ಎರಡನೆಯದ್ದಾಗಿದೆ’ ಎಂದು ಹೇಳಿದ್ದಾರೆ.
ಮಕ್ಕಳ ಪಾಲನಾ ಸಂಸ್ಥೆಗಳಿಂದ ಕೌಟುಂಬಿಕ ವಾತಾವರಣಕ್ಕೆ ಬಿಡುಗಡೆ ಮಾಡಿದ ಮಕ್ಕಳು, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಶಿಫಾರಸು ಮಾಡಿದ ರಕ್ಷಣೆ ಮತ್ತು ಪಾಲನೆ ಅಗತ್ಯ ಇರುವ ಮಕ್ಕಳು, ಮಕ್ಕಳ ಕಾಯ್ದೆ 2015ರ ಅನ್ವಯ ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ ವಸತಿ ರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಕ್ಕೆ ಒಳಗಾದ ಸಂತ್ರಸ್ತರು, ಎಚ್.ಐ.ವಿ., ಮಾರಣಾಂತಿಕ ಕಾಯಿಲೆಗೆ ಒಳಗಾದ ಮಕ್ಕಳು, ಅಂಗವಿಕಲ ಮಕ್ಕಳು, ಮಾನವ ಕಳ್ಳಸಾಗಣೆ ಸಂತ್ರಸ್ತರು, ಬಾಲ ಭಿಕ್ಷುಕರು, ಬೀದಿಯಲ್ಲಿ ವಾಸಿಸುತ್ತಿರುವ ಬೆಂಬಲ ಹಾಗೂ ಪುನರ್ವಸತಿಯ ಅಗತ್ಯ ಇರುವ ಹಿಂಸೆಗೆ ಒಳಪಟ್ಟ, ನಿಂದನೆ ಶೋಷಿತ ಮಕ್ಕಳು, ವಿಧವೆ, ವಿವಾಹ ವಿಚ್ಛೇದಿತ ಅಥವಾ ಕುಟುಂಬದಿಂದ ಪರಿತ್ಯಜಿಸಲಾದ ಮಹಿಳೆಯ ಮಕ್ಕಳು, ಲೈಂಗಿಕವಾಗಿ ದುರ್ಬಳಕೆಯಾದ ಸಂತ್ರಸ್ತ ಮಕ್ಕಳು, ಅವಿಭಕ್ತ ಕುಟುಂಬದಲ್ಲಿರುವ ಅನಾಥ ಮಕ್ಕಳು, ಪಿಎಂ ಕೇರ್ ಫಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಮಕ್ಕಳು, ಜೈಲಿನಲ್ಲಿರುವ ಪಾಲಕರ 18 ವರ್ಷದ ಒಳಗಿನ ಮಕ್ಕಳು ಪ್ರಾಯೋಜಕತ್ವದ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಕುಟುಂಬದೊಂದಿಗೆ ಬೆಳೆಯುವ ಉದ್ದೇಶದಿಂದ ಇಂತಹ ಮಕ್ಕಳಿಗೆ ಒಂದು ವರ್ಷದ ಅವಧಿಗೆ ಮಾಸಿಕ ₹4 ಸಾವಿರದಂತೆ ಆರ್ಥಿಕ ನೆರವು ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ನಗರದ ಮೈಲೂರಿನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯನ್ನು ಸಂಪರ್ಕಿಸಬಹುದು’ ಎಂದು ತಿಳಿಸಿದ್ದಾರೆ.