ದೆಹಲಿ ಮತ್ತು ಹರಿಯಾಣ ನಡುವಿನ ಗಡಿಭಾಗ ಕುಂಡ್ಲಿಯಲ್ಲಿ ಜನವರಿ 12 ರಂದು ನಡೆದ ಕಾರ್ಮಿಕ ಹೋರಾಟದಲ್ಲಿ ದಲಿತ ಕಾರ್ಮಿಕ ಹೋರಾಟಗಾರ್ತಿ ನೋದೀಪ್ ಕೌರ್ ಅವರನ್ನು ಬಂಧಿಸಲಾಗಿತ್ತು. ಈಗ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಪಂಜಾಬ್ ಹರಿಯಾಣ ಕೋರ್ಟ್ ಜಾಮೀನು ನೀಡಿದೆ.
ಕಾರ್ಮಿಕರಿಗೆ ವೇತನದಲ್ಲಿ ಹೆಚ್ಚಳ ಮಾಡಬೇಕೆಂದು ಕೋರಿ ನಡೆಸಿದ ಪ್ರತಿಭಟನೆಯಲ್ಲಿ ನೋದೀಪ್ ಕೌರ್ ಅವರನ್ನು ಬಂಧಿಸಲಾಗಿತ್ತು. ಈ ಹೋರಾಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೂ ಬೆಂಬಲ ಸೂಚಿಸಲಾಗಿತ್ತು.

23 ವರ್ಷದ ದಲಿತ,ಕಾರ್ಮಿಕ ಹೋರಾಟಗಾರ್ತಿ ನೋದೀಪ್ ಕೌರ್ ಹೈಕೋರ್ಟ್‌ಗೆ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ ತನ್ನ ಮೇಲೆ ಕೊಲೆ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಸುಳ್ಳು ಆರೋಪ ಹೊರಿಸಲಾಗಿದೆ ಹಾಗು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 54 ಅನ್ನು ಉಲ್ಲಂಘಿಸಲಾಗಿದೆ, ಮತ್ತು ತನ್ನನ್ನು ವೈದ್ಯಕೀಯ ಪರೀಕ್ಷೆ ಮಾಡಿಲ್ಲ ಎಂದು ಆರೋಪಿಸಿದ್ದರು. ಜೊತೆಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರಿಗೆ ಹೆಚ್ಚಿನ ಬೆಂಬಲ ಸೂಚಿಸಿದ್ದಕ್ಕೆ ನನ್ನನ್ನು ಗುರಿಯಾಗಿಸಿ ಬಂಧಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ನ್ಯಾಯಾಲದ ಆದೇಶದ ಹಿನ್ನಲೆ, ನೋದೀಪ್ ಕೌರ್ ಪರ ವಕೀಲರು ಮಾಧ್ಯಮ ಮುಂದೆ ಮಾತನಾಡಿ ಪೊಲೀಸರು ಆಕೆಯನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಆರೋಪವನ್ನು ನ್ಯಾಯಾಲಯವು ಪ್ರತ್ಯೇಕವಾಗಿ ಪರಿಗಣಿಸಲಿದೆ. ಅವರ ವೈದ್ಯಕೀಯ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರಿಶೀಲಿಸುತ್ತದೆ ಎಂದು ತಿಳಿಸಿದ್ದಾರೆ.
ಪೊಲೀಸರು ನೋದೀಪ್ ಕೌರ್ ರವರನ್ನು ಅಕ್ರಮವಾಗಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯವು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿತ್ತು.







