ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಜೇಮ್ಸ್. ಅವರ ಜನ್ಮದಿನ ಮಾರ್ಚ್ ೧೭ ರಂದು ಚಿತ್ರ ತೆರೆಗೆ ಬರುತ್ತಿದೆ. ಪುನೀತ್ ಪಾತ್ರದ ಚಿತ್ರೀಕರಣ ಮುಗಿದಿತ್ತು ಆದರೆ, ಡಬ್ಬಿಂಗ್ ಕೆಲಸಗಳು ಬಾಕಿ ಉಳಿದಿದ್ದವು. ಇದೇ ಕಾರಣಕ್ಕೆ ಅಪ್ಪು ಪಾತ್ರಕ್ಕೆ ಯಾರು ಧ್ವನಿ ನೀಡಲಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಪುನೀತ್ ಪಾತ್ರಕ್ಕೆ ಅವರ ಹಿರಿಯ ಸಹೋದರ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಡಬ್ ಮಾಡಿದ್ದಾರೆ. ಈ ಕುರಿತು ಸ್ವತಃ ಶಿವಣ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಅಪ್ಪು ಸಮಾಧಿ ಬಳಿ ಮಾತನಾಡಿದ ಅವರು, ಇದು ಬಹಳ ಕಷ್ಟದ ಕೆಲಸ. ಏಕೆಂದರೆ ಅಗಲಿದ ತಮ್ಮನ ಮುಖ ನೋಡಿ ಧ್ವನಿ ನೀಡುವುದು ತುಂಬಾ ಕಷ್ಟ. ಆದರೆ, ಎಲ್ಲರೂ ಕೇಳಿದಾಗ ನಾನು ಇಲ್ಲ ಎನ್ನದೆ ಡಬ್ ಮಾಡಿದ್ದೇನೆ ಎಂದಿದ್ದಾರೆ.

ಮುಂದುವರೆದು, ಅಪ್ಪು ಧ್ವನಿ ಹೊಂದಿಸುವುದು ಬಹಳ ಕಷ್ಟದ ಕೆಲಸ. ಬೇರೆಯವರಿಗೆ ಹಾಡಬಹುದು ಅಥವಾ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಬಹುದು. ಆದರೆ, ಮತ್ತೊಬ್ಬ ಕಲಾವಿದನನ್ನು ಪ್ರವೇಶಿಸಿ ಧ್ವನಿ ನೀಡುವುದು ಬಹಳ ಕಷ್ಟದ ಕೆಲಸ. ಅದಾಗ್ಯೂ ನನ್ನ ಪ್ರಯತ್ನ ನಾನು ಮಾಡಿದ್ದೇನೆ. ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ ಎಂದು ಹೇಳಿದ್ದಾರೆ.












