ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ಶನಿವಾರ (ಆಗಸ್ಟ್ 12) ವರದಿ ಮಾಡಿವೆ.
ಕಳೆದ ಹತ್ತು ವರ್ಷಗಳ ಸಮಾಜದಲ್ಲಿ ಸಾಮರಸ್ಯ ಕದಡುವ, ಸಮಾಜ ವಿರೋಧ ಕಾರ್ಯಗಳ, ಅಪರಾಧ ಪ್ರಕರಣಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಶುಕ್ರವಾರ ತಡರಾತ್ರಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
ಪ್ರಕರಣ ದಾಖಲಾಗಿರುವ ಹಿನ್ನೆಲೆ ಸಿಸಿಬಿ ಪೊಲೀಸರು ಪುನೀತ್‌ನನ್ನು ವಶಕ್ಕೆ ಪಡೆದಿದ್ದಾರೆ.
“ಪುನೀತ್ ಕೆರೆಹಳ್ಳಿ ವಿರುದ್ಧ ರಾಜ್ಯದ 11 ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿತ್ತು. ಕೆಲ ಪ್ರಕರಣಗಳಲ್ಲಿ ಶಿಕ್ಷೆಯೂ ಆಗಿತ್ತು. ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗುತ್ತಿರುವುದರಿಂದ ಪುನೀತ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
“ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್, ನಗರದ ಜೆ.ಪಿ.ನಗರ 7ನೇ ಹಂತದಲ್ಲಿ ವಾಸವಿದ್ದ. ರಾಷ್ಟ್ರ ರಕ್ಷಣಾ ಪಡೆ ಹೆಸರಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುತ್ತಿದ್ದ. ಎಲ್ಲ ಕೃತ್ಯಗಳ ಬಗ್ಗೆ ವರದಿ ಸಿದ್ಧಪಡಿಸಿ ವಶಕ್ಕೆ ಪಡೆಯಲಾಗಿದೆ” ಎಂದು ವರದಿಯಾಗಿದೆ.
32 ವರ್ಷದ ಪುನೀತ್ ಕೆರೆಹಳ್ಳಿ ಬೆಂಗಳೂರಿನ ಜೆಪಿ ನಗರ ನಿವಾಸಿ. ಮೂಲತಃ ಈತ ಹಾಸನದವನು. ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆಯನ್ನು ನಡೆಸುತ್ತಿದ್ದು, ಆ ಮೂಲಕ ಜನರನ್ನು ಬೆದರಿಸುವ, ಸಮಾಜದ ಶಾಂತಿ ಕದಡುವ, ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯಗಳಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ.
ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ವಿರುದ್ಧ ಪೊಲೀಸರು ರೌಡಿಪಟ್ಟಿ ಅಡಿ ಹೆಸರು ದಾಖಲಿಸಲು ಒಂದು ತಿಂಗಳು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಕಳೆದ ತಿಂಗಳು ಚಾಮರಾಜಪೇಟೆ ಉಪ ವಿಭಾಗದ ಪೊಲೀಸರು ಪುನೀತ್ಗೆ ತಿಳಿವಳಿಕೆ ನೋಟಿಸ್ ಜಾರಿ ಮಾಡಿದ್ದರು.
ಪುನೀತ್ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆ, ರಾಮನಗರ ಜಿಲ್ಲೆಯ ಸಾತನೂರು ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ದೊಂಬಿ, ಕೊಲೆ, ಹಲ್ಲೆ, ಪ್ರಾಣ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ರೌಡಿಪಟ್ಟಿ ತೆರೆಯಲು ಸಿದ್ಧತೆ ನಡೆದಿದೆ ಎಂದು ಚಾಮರಾಜಪೇಟೆ ಪೊಲೀಸರು ಮಾಹಿತಿ ನೀಡಿದ್ದರು.
“ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ನಿಮ್ಮ ಮೇಲೆ ಏಕೆ ರೌಡಿಪಟ್ಟಿ ತೆರೆಯಬಾರದು ಎಂಬುದಕ್ಕೆ ನನಗೆ ವಿವರಣೆ ಸಲ್ಲಿಸಬಹದು. ಇಲ್ಲದಿದ್ದರೆ ವಿವರಣೆ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು” ಎಂದು ಚಿಕ್ಕಪೇಟೆ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಪುನೀತ್ ಕೆರೆಹಳ್ಳಿ ಆರೋಪಿಗೆ ಜಾರಿಗೊಳಿಸಿರುವ ನೋಟಿಸ್ನಲ್ಲಿ ಉಲ್ಲೇಖಿಸಿದ್ದರು.
ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರರ ಬಾಕಿ ಬಿಲ್ | ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಇತ್ತೀಚೆಗೆ ರಾಮನಗರ ಜಿಲ್ಲೆಯಲ್ಲಿ ಗೋ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಪುನೀತ್ ಬಂಧನಕ್ಕೆ ಒಳಗಾಗಿ ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆಯಾಗಿತ್ತು.
ಗೂಂಡಾ ಕಾಯ್ದೆಯಲ್ಲಿ ಬಂಧಿಸಲಾದ ವ್ಯಕ್ತಿಯನ್ನು ಇತರ ಪ್ರಕರಣಗಳ ಮಾದರಿಯಲ್ಲಿ 24 ಗಂಟೆಗಳ ಒಳಗೆ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾದ ಅಗತ್ಯ ಇರುವುದಿಲ್ಲ. ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನವನ್ನು ಪದೇ ಪದೇ ವಿಸ್ತರಿಸಿಕೊಳ್ಳುವ ಪ್ರಕ್ರಿಯೆಯ ಅಗತ್ಯವೂ ಇಲ್ಲದೇ ನೇರವಾಗಿ ಜೈಲಿಗೆ ಕಳುಹಿಸಬಹುದು. ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿತನಾದಲ್ಲಿ ಅಪರಾಧಿಗೆ ನ್ಯಾಯಾಲಯದಲ್ಲಿ ಒಂದು ವರ್ಷ ಜಾಮೀನು ಸಿಗುವುದಿಲ್ಲ. ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಹಿನ್ನೆಲೆ ಪುನೀತ್ ಕೆರೆಹಳ್ಳಿ ಆರೋಪಿಗೆ ಒಂದು ವರ್ಷದ ಮಟ್ಟಿಗೆ ಜಾಮೀನು ದೊರೆಯುವುದು ಅನುಮಾನ ಎನ್ನಲಾಗಿದೆ.