ಕೇಂದ್ರ ಸರ್ಕಾರ ಹಾಗೂ ಭಾರತದ ಪ್ರಮುಖ ಸುದ್ದಿ ಏಜೆನ್ಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ನಡುವಿನ ಸಮರ ಮುಂದುವರೆದಿದೆ. ದೆಹಲಿಯ ಸಂಸದ್ ಮಾರ್ಗ್ ರಸ್ತೆಯಲ್ಲಿರುವ ಪಿಟಿಐ ಕಚೇರಿಯ ಬಾಡಿಗೆಯನ್ನು ಪಾವತಿಸದ ಕಾರಣಕ್ಕೆ ಬರೋಬ್ಬರಿ 84.48 ಕೋಟಿ ರೂ.ಗಳ ದಂಡವನ್ನು ಕೇಂದ್ರ ಸರ್ಕಾರ ವಿಧಿಸಿದೆ.
ಕಳೆದ ತಿಂಗಳು ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ತಾರಕಕ್ಕೇರಿದ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದವು. ಈ ಸಂದರ್ಭದಲ್ಲಿ ಚೀನಾ ರಾಯಭಾರಿ ಸುನ್ ವೀಡೊಂಗ್ (Sun Weidong) ಅವರ ಸಂದರ್ಶನವನ್ನು PTI ಪ್ರಸಾರ ಮಾಡಿತ್ತು. ಇದರಲ್ಲಿ ಸುನ್ ವೀಡೊಂಗ್ ಎಲ್ಲಾ ದೋಷವನ್ನು ಭಾರತದ ಮೇಲೆ ಹೊರಿಸಿದ್ದರು. ಇದಾದ ನಂತರ PTI ವಿರದ್ದ ಕೇಂದ್ರ ಸರ್ಕಾರ ಕೆಂಡಕಾರಲು ಆರಂಭಿಸಿತ್ತು.
ಇದೇ ವಿಚಾರಕ್ಕಾಗಿ PTI ವಿರುದ್ದ ಕಾನೂನು ಸಮರಕ್ಕೂ ಕೇಂದ್ರ ಮುಂದಾಗಿತ್ತು. ಇದರಿಂದಾಗಿ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಲ್ಲಿಗೆ ತಲುಪಿದೆ ಎಂಬ ಕುರಿತಾದ ಚರ್ಚೆಗಳು ಸಾಕಷ್ಟು ನಡೆದವು. ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಸುದ್ದಿ ಸಂಸ್ಥೆಗಳ ವಿರುದ್ದ ಮೊಕದ್ದಮೆ ದಾಖಲಿಸುವ ಪರಿಪಾಠ ಬೆಳೆಸಿದ್ದಲ್ಲಿ ಪತ್ರಿಕಾ ಸ್ವಾತಂತ್ರ್ಯವೆನ್ನುವುದು ನಗಣ್ಯವಾಗುವುದಂತೂ ಸತ್ಯ.
ಈಗ ಆಂಗ್ಲ ವೆಬ್‌ಸೈಟ್ ದಿ ಪ್ರಿಂಟ್ ವರದಿ ಮಾಡಿರುವ ಪ್ರಕಾರ 84.48 ಕೋಟಿ ರೂ.ಗಳ ದಂಡವನ್ನು PTIಗೆ ವಿಧಿಸಿದೆ ಎಂದು ಹೇಳಿದೆ. ಆಗಸ್ಟ್ 7ರ ಒಳಗೆ ಈ ಮೊತ್ತವನ್ನು ಪಾವತಿ ಮಾಡದಿದ್ದಲ್ಲಿ ಬಾಕಿ ಮೊತ್ತದ ಮೇಲೆ 10% ಬಡ್ಡಿದರವನ್ನು ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ. ಈ ಕುರಿತಾಗಿ ಯಾವುದೇ ತಕರಾರಿದ್ದಲ್ಲಿ ಒಂದು ವಾರದೊಳಗೆ ಸಂಪರ್ಕಿಸಬೇಕೆಂದು ಕೇಂದ್ರ ಭೂಮಿ ಮತ್ತು ಅಭಿವೃದ್ದಿ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ.
ವಸತಿ ಇಲಾಖೆಯ ಅಧಿಕಾರಿಗಳ ಪ್ರಕಾರ 1984ರಿಂದ ಕಟ್ಟಡವನ್ನು ಕಟ್ಟಿರುವ ನೆಲದ ಬಾಡಿಗೆಯನ್ನು PTI ಪಾವತಿಸಿಲ್ಲ. ಇಷ್ಟು ಮಾತ್ರವಲ್ಲದೇ ಗುತ್ತಿಗೆಯ ಹಲವು ನಿಯಮಗಳನ್ನೂ PTI ಮುರಿದಿದೆ. ಗುತ್ತಿಗೆಯ ನಿಯಮಗಳ ಪ್ರಕಾರ ನೆಲ ಮಹಡಿಯನ್ನು ಕೇವಲ ಸಂಗ್ರಾಹಕವಾಗಿ ಮಾತ್ರ ಉಪಯೋಗಿಸಬಹುದಾಗಿದೆ. ಆದರೆ, PTI ನೆಲಮಹಡಿಯನ್ನು ಕಚೇರಿಯಾಗಿ ಉಪಯೋಗಿಸುತ್ತಿದೆ, ಎಂದು ಹೇಳಿದ್ದಾರೆ.
ಇಂತಹ ʼಬೆದರಿಕೆʼಯನ್ನು PTI ಎದುರಿಸುತ್ತಿರುವುದು ಇದೇ ಮೊದಲಲ್ಲ. ರಾಷ್ಟ್ರದ ಹಿತಾಸಕ್ತಿಗೆ ವಿರುದ್ದವಾಧ ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕೆ ಪ್ರಸಾರ ಭಾರತಿಯು ತನ್ನ ಹಾಗೂ PTI ನಡುವಿನ ವಾರ್ಷಿಕ 7 ಕೋಟಿ ರೂ.ನ ಒಪ್ಪಂದವನ್ನು ಮುರಿಯುವುದಾಗಿ ಹೇಳಿತ್ತು. ಆದರೆ, ಈ ಕುರಿತಾಗಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ.