ಹಾಸನ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಹಗರಣ ಮೊದಲನೇ ಬಲಿ ಪಡೆದಿದೆ. ಅಕ್ರಮ ಪ್ರಕರಣ ಬಂಧಿತರಾಗಿರುವ ಹೊಳೆನರಸೀಪುರ ಅಭ್ಯರ್ಥಿ ಮನು ಕುಮಾರ್ ಅವರ ಅಣ್ಣ ವಾಸು (36) ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ ವಾಸು ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು.
ತಮ್ಮನ ಪಿಎಸ್‌ಐ ಕೆಲಸಕ್ಕೆಂದು ಮಧ್ಯವರ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಹಣ ಹೊಂದಿಸಿಕೊಟ್ಟಿದ್ದರು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಹಣವೂ ಹೊಯ್ತು, ತಮ್ಮನ ಕೆಲಸವೂ ಹೊಯ್ತು ಅಂತ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
‘ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಕೆಲಸದಿಂದ ತೆಗೆಯಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತನ ತಾಯಿ ಶಿವಮ್ಮ ತಿಳಿಸಿದ್ದಾರೆ.