ಬೆಂಗಳೂರು: ಏ .15 : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಉಲ್ಲೇಖಿಸಿ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ನಟ ಚೇತನ್ ಅವರ ಭಾರತದ ಸಾಗರೋತ್ತರ ನಾಗರೀಕ ವೀಸಾ(OCI) ಕೇಂದ್ರ ಗೃಹ ಸಚಿವಾಲಯ ರದ್ದು ಪಡಿಸಿದೆ. ಈ ಸಂಬಂಧ ಚೇತನ್ ಅವರಿಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO)ವತಿಯಿಂದ ಪತ್ರವನ್ನು ಕಳುಹಿಸಲಾಗಿದ್ದು 15 ದಿನದೊಳಗೆ OCI ಕಾರ್ಡ್ ಅನನ್ಉ ಹಿಂತಿರುಗಿಸುವಂತೆ ಸೂಚಿಸಿದೆ.
ಕಳೆದ ವರ್ಷ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಹಿಜಾಬ್ ವಿಚಾರದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಟ ಚೇತನ್ ಅವಹೇಳನಕಾರಿ ಪೋಸ್ಟ್ ಒಂದನ್ನು ಹಾಕಿದ್ದರು. 21ನೇ ಶತಮಾನದಲ್ಲಿ ನ್ಯಾಯಮೂರ್ತಿ ಒಬ್ಬರ ಸ್ತ್ರೀ ದ್ವೇಷ ನಾಚಿಕೆಗೇಡಿನ ಸಂಗತಿ. ಅಂದು ಅಸಹ್ಯಕರ ಹೇಳಿಕೆ ನೀಡಿದವರು ಇಂದು ವಿದ್ಯಾ ಸಂಸ್ಥೆಗಳಲ್ಲಿ ಹಿಜಾಬ್ ಬೇಕೇ, ಬೇಡವೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ. ಅವರಿಗೆ ಈ ವಿಚಾರದ ಬಗ್ಗೆ ಸ್ಪಷ್ಟತೆಯ ಅವಶ್ಯಕತೆಯಿದೆ ಎಂದು ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಚೇತನ್ರನ್ನು ಬಂಧಿಸಿದ್ದರು.
ನೋಟಿಸ್ ಜಾರಿ
ನಟ ಚೇತನ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ FRRO ಅಧಿಕಾರಿಗಳು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ನಿಮ್ಮ OCI ವೀಸಾವನ್ನು ಏಕೆ ರದ್ದು ಮಾಡಲು ಕೇಂದ್ರ ಸರ್ಕಾರಕ್ಕೆ ಏಕೆ ಮನವಿ ಸಲ್ಲಿಸಬಾರದು ಎಂಬುದರ ಕುರಿತು ಕಾರಣ ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಚೇತನ್ ನಾನು ಸಾಮಾಜಿಕ ಹೋರಾಟ ಹಾಗೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು ಭಾರತೀಯ ಯುವತಿಯನ್ನು ವಿವಾಹ ಆಗಿದ್ದೇನೆ ಎಂದು ನೋಟಿಸ್ಗೆ ಉತ್ತರಿಸಿದ್ದರು. ಇದಾದ ಬಳಿಕ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ ಆರೋಪದ ಮೇಲೆ ನಟ ಚೇತನ್ರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು.
ನನ್ನ ವೀಸಾವನ್ನು ರದ್ದುಗೊಳಿಸಿದೆ
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ನಟ ಚೇತನ್ ನಿನ್ನೆ ಅಂಬೇಡ್ಕರ್ ಜಯಂತಿಯಂದು ಕೇಂದ್ರ ಗೃಹ ಸಚಿವಾಲಯವು ಭಾರತದಲ್ಲಿ ಉಳಿಯಲು ನನ್ನ ವೀಸಾವನ್ನು ರದ್ದುಗೊಳಿಸಿದೆ ಎಂದು ಕಿಡಿಕಾರಿದ್ದಾರೆ. OCI ರದ್ದುಪಡಿಸಿದ ಕುರಿತು ಕೇಂದ್ರ ಸರ್ಕಾರ ಮಾರ್ಚ್ 28ರಂದು ಆದೇಶ ಹೊರಡಿಸಿತ್ತು. ಇದಾದ ಬಳಿಕ FRRO ಚೇತನ್ ಅವರಿಗೆ ಏಪ್ರಿಲ್ 14ರಂದು ನೋಟಿಸ್ ಜಾರಿ ಮಾಡಿತ್ತು. OCI ಕಾರ್ಡ್ ಹಿಂತಿದುಗಿಸಿದ ನಂತರ ಚೇತನ್ ಅವರು ದೇಶ ತೊರೆಯಬೇಕು. ವಾಪಸ್ ದೇಶದೊಳಗೆ ಬರಬೇಕೆಂದರೆ ಅವರು ಪುನಃ ವಿಸಾಗಾಗಿ ಅರ್ಜಿ ಹಾಕಬೇಕು ಅದು ದೊರೆತ ನಂತರವೇ ಅವರು ಬರಬಹುದು ಎಂದು FRRO ಅಧಿಕಾರಿಗಳು ತಿಳಿಸಿದ್ದಾರೆ.

OCI ರದ್ದು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ
ನ್ಯಾಯಾಧೀಶರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ಧಾರೆಂದು ಆರೋಪಿಸಿ OCIರದ್ದು ಮಾಡಿರುವ ಕುರಿತು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ತಮ್ಮ ವಕೀಲರ ಜೊತೆ ಮಾತುಕತೆ ನಡೆಸಿದ್ದು ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಲು ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಕಾನೂನು ಬದ್ಧವಾದ ಸೂಕ್ತ ಕಾರಣ ನೀಡದೆ ನನ್ನ OCI ವೀಸಾವನ್ನು ರದ್ದು ಮಾಡಲಾಗಿದೆ. ಈ ಬಗ್ಗ ಏಪ್ರಿಲ್ 14ರಂದು ವೀಸಾ ರದ್ಧತಿಯ ಆದೇಶ ಪ್ರತಿ ನನ್ನ ಕೈ ಸೇರಿದೆ. ಈ ಕುರಿತು ನಾನು ನನ್ನ ವಕೀಲರ ಜೊತೆ ಚರ್ಚೆ ನಡೆಸಿದ್ದು ಹೈಕೋರ್ಟ್ನಲ್ಲಿ ರದ್ಧತಿ ಪ್ರಶ್ನಿಸಿ ಅರ್ಜಿ ಸಲ್ಲಿಸುತ್ತೇನೆ. ಇದಕ್ಕಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ಧಾರೆ.
ಕಾನೂನಿನ ಮೂಲಕ ಉತ್ತರಿಸುತ್ತೇನೆ
ಕಳೆದ 18 ವರ್ಷಗಳಿಂದ ನಾನು ಭಾರತದಲ್ಲೇ ಇದ್ದೇನೆ. 12 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ ನನ್ನನು ಸೈದ್ದಾಂತಿಕವಾಗಿ ಸೋಲಿಸಲು ಆಗದೇ ಇರುವವರು ಅನ್ಯ ಮಾರ್ಗಗಳ ಮೂಲಕ ಈ ರೀತಿ ಮಾಡುತ್ತಿದ್ದಾರೆ. ಅಂತವರಿಗೆ ಕಾನೂನಿನ ಮೂಲಕ ಉತ್ತರ ಕೊಡುತ್ತೇನೆ ಎಂದು ತಿಳಿಸಿದ್ಧಾರೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 3 ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು 1 ಪ್ರಕರಣದ ವಿರುದ್ಧ ತಡೆಯಾಜ್ಞೆ ಇದೆ. ಆದರೆ ಯಾವ ಪ್ರಕರಣಗಳು ಸಹ ಸಾಬೀತಾಗಿಲ್ಲ. ಇಂತಹ ಸಮಯದಲ್ಲಿ ಈ ರೀತಿ ಮಾಡಿರುವುದು ನ್ಯಾಯಸಮ್ಮತವಲ್ಲ ಎಂದು ಕಿಡಿಕಾರಿದ್ಧಾರೆ.