ಮೂರು ವಿವಾದಾತ್ಮಕ ಕೃಷಿ ಕಾನೂನು ವಿರೋಧಿಸಿ ಮತ್ತು ಅನೇಕ ಬೇಡಿಕೆಯನ್ನು ಒತ್ತಾಯಿಸಿ ಕಳೆದ ಒಂದು ವರ್ಷಗಳಿಂದ ದೆಹಲಿ ಗಡಿ ಸೇರಿದಂತೆ ನಿರಂತರ ರೈತಪ್ರತಿಭಟನೆಗೆ ಮಂಡಿಯೂರಿರುವ ಕೇಂದ್ರ ಸರ್ಕಾರ ತಮ್ಮಲ್ಲೆ ಬೇಡಿಕೆಗಳನ್ನು ಈಡೇರಿಸುವುದಾಗಿ ಪತ್ರವೊಂದನ್ನು ಪ್ರತಿಭಟನಾ ನಿರತ ರೈತರಿಗೆ ರವಾನಿಸಿದೆ. ಇದನ್ನು ಸ್ವಾಗತಿಸಿರುವ ಎಸ್.ಕೆ.ಎಮ್ ಹೋರಾಟವನ್ನು ಮುಕ್ತಾಯಗೊಳಿಸಲು ತೀರ್ಮಾಸಿದೆ ಆದರೆ ಸರ್ಕಾರ ಭರವಸೆಯಿಂದ ಹಿಂದೆ ಸರಿದರೆ ಪ್ರತಿಭಟನೆ ಮತ್ತೆ ಪುನರಾರಂಭಿಸುತ್ತೆವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಕೇಂದ್ರ ಬರೆದಿರುವ ಪತ್ರ ಈ ಕೆಳಗಿದೆ. ಅದರ ಸಂಕ್ಷಿಪ್ತ ಒಕ್ಕಣೆ ಇಲ್ಲಿದೆ –
1. ಕನಿಷ್ಠ ಬೆಂಬಲ ಬೆಲೆಯ ಕುರಿತಂತೆ ಸ್ವತಃ ಪ್ರಧಾನಿಯವರು, ಕೃಷಿ ಸಚಿವರು ಒಂದು ಸಮಿತಿಯನ್ನು ರಚಿಸುವುದಾಗಿ ಹೇಳಿದ್ದಾರೆ. ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಚಳವಳಿಯ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೃಷಿ ತಜ್ಞರು ಇರುತ್ತಾರೆ. SKM ನ ಪ್ರತಿನಿಧಿಗಳೂ ಇರಲಿದ್ದಾರೆ. ದೇಶದ ರೈತರಿಗೆ MSP ನಿಶ್ಚಿತವಾಗಿ ಹೇಗೆ ದೊರಕಬೇಕು ಎನ್ನುವುದನ್ನು ನಿರ್ಣಯಿಸುವ ಒಂದೇ ಮ್ಯಾಂಡೇಟ್ ಸಮಿತಿಯದ್ದಾಗಿರುತ್ತದೆ. ಈಗಾಗಲೇ ಹೇಳಿರುವಂತೆ ದೇಶದಲ್ಲಿ ಈವರೆಗೆ ಇದ್ದ MSP ಖರೀದಿ ಪ್ರಕ್ರಿಯೆ ಯಥಾವತ್ ಜಾರಿಯಲ್ಲಿರುತ್ತದೆ.
2. ಯುಪಿ, ಹರಿಯಾಣ, ಉತ್ತರಾಖಂಡ, ಮಧ್ಯಪ್ರದೇಶ ಮತ್ತು ಹಿಮಾಚಲಪ್ರದೇಶ ಸರ್ಕಾರಗಳು ಈ ಚಳುವಳಿಯ ಸಂಬಂಧ ಹೋರಾಟಗಾರರ ಮೇಲೆ ದಾಖಲಿಸಿರುವ ಕೇಸುಗಳನ್ನು ತತ್ ಕ್ಷಣದಿಂದ ಕೈಬಿಡುವುದಾಗಿ ಒಪ್ಪಿಕೊಂಡಿವೆ.
2A. ಭಾರತ ಸರ್ಕಾರದ ವಿವಿಧ ಏಜೆನ್ಸಿಗಳು ಹೋರಾಟಗಾರರ ಮೇಲೆ ಹೂಡಿರುವ ಎಲ್ಲ ಕೇಸುಗಳನ್ನೂ ತತ್ ಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯುವುದಾಗಿ ಒಪ್ಪಿಕೊಳ್ಳಲಾಗಿದೆ.

3. ಹುತಾತ್ಮ ರೈತರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತಂತೆ ಯುಪಿ ಮತ್ತು ಹರಿಯಾಣ ಸರ್ಕಾರಗಳು ತಾತ್ವಿಕವಾಗಿ ಒಪ್ಪಿಕೊಂಡಿವೆ. ಪಂಜಾಬ್ ಸರ್ಕಾರ ಕೂಡ ಈ ಕುರಿತಂತೆ ಘೋಷಣೆಯನ್ನು ಮಾಡಿದೆ.
4. ವಿದ್ಯುಚ್ಛಕ್ತಿ ಬಿಲ್ ನಲ್ಲಿ ರೈತರ ಮೇಲೆ ಒತ್ತಡ ಬೀಳುವ ಅಂಶಗಳಿಗೆ ಸಂಬಂಧಿಸಿದಂತೆ ಎಲ್ಲ ಭಾಗೀದಾರರು ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿನಿಧಿಗಳ ಜೊತೆ ವಿಸ್ತೃತವಾಗಿ ಚರ್ಚಿಸಿದ ನಂತರವೇ ಬಿಲ್ ಅನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು.
5. ಕೂಳೆ ಸುಡುವುದರ ವಿರುದ್ಧದ ಕಾನೂನನ್ನು ಕುರಿತಂತೆ, ಈ ಮೊದಲು ಕಾಯ್ದೆಯಲ್ಲಿ ಇದ್ದ ಕ್ರಿಮಿನಲ್ ಪ್ರಕ್ರಿಯೆಯನ್ನು ಹೇಳುವ 14 ಮತ್ತು 15ನೇ ಕಲಂಗಳಲ್ಲಿ ರೈತರನ್ನು ಕೈಬಿಡಲಾಗುವುದು.
ಈ ಐದೂ ಬೇಡಿಕೆಗಳನ್ನು ಈಡೇರಿಸಿದ ಮೇಲೆಯೂ ರೈತರು ಈ ಚಳುವಳಿಯನ್ನು ಮುಂದುವರೆಸುವುದರಲ್ಲಿ ಯಾವುದೇ ಔಚಿತ್ಯವಿರುವುದಿಲ್ಲ ಎಂದು ಕೇಂದ್ರ ಕೃಷಿ ಕಾರ್ಯದರ್ಶಿ ಸಂಜಯ್ ಅಗ್ರವಾಲ್ ಅವರು ಪತ್ರವನ್ನು ರೈತರಿಗೆ ರವಾನಿಸಿದ್ದಾರೆ.
ಭರವಸೆಯಿಂದ ಹಿಂದೆ ಸರಿದರೆ ಪ್ರತಿಭಟನೆ ಪುನರಾರಂಭ
ಸರ್ಕಾರವು ಒಪ್ಪಿಗೆ ಸೂಚಿಸಿದ ಪ್ರಸ್ತಾವನೆಗಳನ್ನು ಜಾರಿಗೊಳಿಸಿದರೆ ಪರಿಶೀಲಿಸಲು ಜನವರಿ 15 ರಂದು ಒಕ್ಕೂಟಗಳು ಸಭೆ ಸೇರಲಿವೆ, ಕೇಂದ್ರವು ತನ್ನ ಭರವಸೆಯಿಂದ ಹಿಂದೆ ಸರಿದರೆ ಪ್ರತಿಭಟನೆಯನ್ನು ಪುನರಾರಂಭಿಸುತ್ತೇನೆ ಎಂದು ರೈತ ನಾಯಕ ಮತ್ತು ಸಂಯುಕ್ತ ಕಿಸಾನ್ ಮೊರ್ಚಾದ ಸದಸ್ಯ ಎಸ್‌ಕೆಎಂ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಎಚ್ಚರಿಕೆ ರವಾನಿಸಿದ್ದಾರೆ.










