ಭಾರತೀಯ ಸೇನೆಯಲ್ಲಿ ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆ ವಿರೋಧಿಸಿ ವಿದ್ಯಾರ್ಥಿಗಳು ಹಾಗು ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದ್ದು ಬಿಹಾರದಲ್ಲಿ ಬಿಜೆಪಿ ಕಚೇರಿ ಹಾಗು ಮಹಿಳಾ ಶಾಸಕಿ ಮೇಲೆ ಹಲ್ಲೆ ಮಾಡಲಾಗಿದೆ.
ಬಿಹಾರದ ನವಾಡದಲ್ಲಿ ಬಿಜೆಪಿಯ ಮಹಿಳಾ ಶಾಸಕಿ ಅರುಣಾ ದೇವಿ ಹಾಗು ಬೆಂಗಾವಲು ಪಡೆಯ ಮೇಲೆ ಉದ್ರಿಕ್ತರ ಗುಂಪು ಕಲ್ಲು ತೂರಾಟ ನಡೆಸಿದ್ದು ಶಾಸಕಿ ಸೇರಿಂದತೆ ಐವರು ಗಾಯಗೊಂಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕಿ ಅರುಣಾ ನನ್ನ ಕಾರಿನ ಮೇಲೆ ಪಕ್ಷದ ಧ್ವಜವನ್ನ ನೋಡಿದ ಪ್ರತಿಭಟನಕಾರರು ಕುಪಿತಗೊಂಡು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನನ್ನ ಮೇಲೆ, ಕಾರು ಚಾಲಕ, ನಾಲ್ವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಪೊಲೀಸ್ ದೂರು ದಾಖಲಿಸಲು ಸಹ ನನ್ನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರತಿಭಟನಾ ನಿರತರು ನವಾಡದ ಅತುವಾ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯ ಮೇಲೆ ದಾಳಿ ಮಾಡಿದ್ದು ಕಚೇರಿಯ ಒಳಾಂಗಣದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪೊಲೀಸರು ಹಾಗು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಕುಮಾರ್ ಮುನ್ನ ಘಟನೆಯಲ್ಲಿ ಸಾಕಷ್ಟು ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾಳಾಗಿವೆ ಎಂದು ಆರೋಪಿಸಿದ್ದಾರೆ.
ನಗರ ವ್ಯಾಪ್ತಿಯಿಂದ 5 ಕಿಲೋಮೀಟರ್ ದೂರದಲ್ಲಿರುವ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದು ಪೂರ್ವ ನಿಯೋಜಿತ ಸಂಚು ಎಂಬುದು ಬಯಲಾಗಿದ. ಈ ಬಗ್ಗೆ ದೂರನ್ನು ದಾಖಲಿಸಿ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
