ವಿದೇಶಿ ಕಂಪನಿಯಾದರು ದೇಶದಾದ್ಯಂತ ತನ್ನದೆ ಛಾಪು ಮೂಡಿಸಿರುವ KFC ಫಾಸ್ಟ್ ಫುಡ್ ಅಂಗಡಿ ಮಳಿಗೆಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಅಮೆರಿಕಾ ಮೂಲದ ಕರ್ನಲ್ ಹರ್ಲ್ಯಾಂಡ್ ಸಾಂಡರ್ಸ್ ಎಂಬ ವೃದ್ಧ ವ್ಯಕ್ತಿಯಿಂದ ಆರಂಭವಾದ ಕೆಂಚುಕಿ ಫ್ರೈಡ್ ಚಿಕನ್ (KFC) ಎಂಬ ಈ ಕಂಪನಿ ನಮ್ಮ ದೇಶದ್ದೆ ಎನ್ನುವ ಮಟ್ಟಿಗೆ ಜನಪ್ರಿಯವಾಗಿದೆ.
ಇಂತಹ ಒಂದು ವಿದೇಶಿ ಕಂಪನಿಗೆ, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಸಮರ ಸಾರಿರುವ ರೈತರು ಇಟ್ಟಿರುವ ಹೆಸರು ಮತ್ತಷ್ಟು ಕುತೂಹಲಕಾರಿಯಾಗಿದೆ. ಹೌದು. KFC ಎಂದರೆ ಕೆಂಚುಕಿ ಫ್ರೈಡ್ ಚಿಕನ್ ಅಲ್ಲವಂತೆ, ಪ್ರತಿಭಟನಾ ನಿತರ ರೈತರ ಪ್ರಕಾರ ಕಿಸಾನ್ ಫುಡ್ ಕಾರ್ನರ್ (Kisaan Food Corner) ಎಂದು.
ಸಿಂಘು ಗಡಿಯಲ್ಲಿ ಕಳೆದ 50 ದಿನಗಳಿಂದ ಹೋರಾಟ ನಿರತ ರೈತರು ಇಲ್ಲಿಯೇ ಇರುವ KFC ಮಾಲ್ ಅನ್ನು ರೈತ ಹೋರಾಟಕ್ಕಾಗಿ ಪಡೆದಿದ್ದಾರೆ. ಇಲ್ಲಿ ರೈತರಿಗೆ, ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ನೀಡಲಾಗುವ ಲಂಗರ್ಗಾಗಿ (ಆಹಾರಕ್ಕಾಗಿ) ಬೇಕಾಗುವ ಎಲ್ಲಾ ಬಗೆಯ ಆಹಾರ ಸಾಮಾಗ್ರಿಗಳನ್ನು ಇಲ್ಲಿ ಶೇಖರಿಸಲಾಗಿದೆ.
KFC ಮಳಿಗೆ ಮೇಲೆ ಈ ರೀತಿಯ ಬರಹ ಹಾಕಿರುವ ಭಿತ್ತಿಪತ್ರವನ್ನು ಪ್ರತಿಭಟನಾಕಾರರು ಅಂಟಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಕಾಣಿಸಿಕೊಂಡಿರುವ ಈ ಮಾಲ್, ಹೊಸ ಹೆಸರಿನೊಂದಿಗೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೆ ಈ ಕಿಸಾನ್ ಫುಡ್ ಕಾರ್ನರ್ ಕೂಡ ಕಾರಣ. ದೆಹಲಿ ಚಲೋ ಆರಂಭವಾದ ನವೆಂಬರ್ 26, 27 ರಿಂದಲೂ ಲಂಗರ್ ಗಳನ್ನು ಹಾಕಿರುವ ತಂಡಗಳು ಇಲ್ಲಿ ದಿನಸಿ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದಾರೆ.
ʼಪ್ರತಿಭಟನೆ ಆರಂಭವಾದಾಗಿನಿಂದ ಈ ಮಾಲ್ನಲ್ಲಿ ನಾವು ಇಲ್ಲಿಯ ಹತ್ತಿರದ ಲಂಗರುಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಇಡುತ್ತಿದ್ದೆವೆ. ಈ ಕಾರಣದಿಂದಲೇ ನಾವು KFC ಎಂಬ ಹೆಸರನ್ನು ಕಿಸಾನ್ ಫುಡ್ ಕಾರ್ನರ್ ಎಂದು ನಾಮಕರಣ ಮಾಡಿದ್ದೆವೆ. ಈಗ ಇಲ್ಲಿ ಎಲ್ಲರೂ ಇದನ್ನು ಕಿಸಾನ್ ಫುಡ್ ಕಾರ್ನರ್ ಎಂದು ಕರೆಯುತ್ತಿದ್ದಾರೆ. ಮಾಲ್ ಮೇಲೆ ಇರುವ KFC ಎಂಬ ದೊಡ್ಡ ಬೋರ್ಡ್ ಪಕ್ಕದಲ್ಲಿಯೂ ನಾವು K- Kisaan, F-Food C-Corner ಎಂದು ಅದರ ಅರ್ಥವನ್ನು ಬಿಡಿಸಿ ಬರೆದಿದ್ದೇವೆʼ ಎಂದು ಮಾರುತಿ ಮಾನವ್ ಎಂಬ ಪ್ರತಿಭಟನಾ ನಿರತ ವಿದ್ಯಾರ್ಥಿ ತಿಳಿಸಿದ್ದಾರೆ.
KFC ಮೇಲೆ ತಮ್ಮ ಹಕು ಸ್ಥಾಪಿಸಿರುವ ರೈತರು. ಇದೂ ನಮ್ಮ ಹೋರಾಟದಲ್ಲಿ ನಮಗೆ ಬೆಂಬಲ ನೀಡುತ್ತಿದೆ ಎಂದು ಹೆಮ್ಮೆ ಪಡುತ್ತಾರೆ. ಇಷ್ಟೇ ಅಲ್ಲದೆ ಪ್ರವಾಸಿ ತಾಣವಾಗಿ, ಹೊಸ ನಗರವಾಗಿ ಮಾರ್ಪಾಡಾಗಿರುವ ಪ್ರತಿಭಟನಾ ಸ್ಥಳಗಳಾಗಿರುವ ದೆಹಲಿಯ ಗಡಿಗಳಿಗೆ ಹಲವಾರು ಮಂದಿ ನಗರ ಪ್ರದೇಶದವರು ಭೇಟಿ ನೀಡುತ್ತಿದ್ದಾರೆ. ಕೆಲವರು ಪ್ರತಿಭಟನೆ ನೋಡಲು ಬರುತ್ತಾರೆ. ಮತ್ತೆ ಕೆಲವರು ಸೇವೆ ಮಾಡಲು, ಇನ್ಯಾರೋ ರೈತರಿಗೆ ಬೆಂಬಲ ನೀಡಲು ಮತ್ತಷ್ಟು ಜನ ರೈತರಿಗಾಗಿ ದೇಣಿಗೆ ನೀಡಲು ಇಲ್ಲಿಗೆ ಪ್ರತಿ ದಿನ ಬರುತ್ತಿದ್ದಾರೆ.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ