ದೆಹಲಿಯಲ್ಲಿ ನಡೆದ ಬೃಹತ್ ಟ್ರಾಕ್ಟರ್ ಪರೇಡ್ ಓರ್ವ ರೈತ ಪ್ರತಿಭಟನಾಕಾರನ ಹತ್ಯೆಯೊಂದಿಗೆ ಅವಸಾನವಾಗಿದೆ. ಹುತಾತ್ಮ ಹೋರಾಟಗಾರನನ್ನು ಉತ್ತರಾಖಂಡದ ನವನೀತ್ ಸಿಂಗ್ ಎಂದು ಗುರುತಿಸಲಾಗಿದೆ.
34 ವರ್ಷದ ನವನೀತ್ ಸಿಂಗ್ ದೆಹಲಿಯ ದೀನ್ ದಯಾಳ್ ಮಾರ್ಗದಲ್ಲಿರುವ ಆಂಧ್ರ ಎಜುಕೇಶನ್ ಸೊಸೈಟಿ ಬಳಿ ಮಧ್ಯಾಹ್ನ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದಿ ಕ್ಯಾರವಾನ್ ಟ್ವೀಟ್ ಮಾಡಿದೆ.
ನವನೀತ್ ಮೃತಪಟ್ಟ ಸಂಧರ್ಭದ ಪ್ರತ್ಯಕ್ಷದರ್ಶಿಯಾದ ಹರ್ಮನ್ಜಿತ್ ಸಿಂಗ್, “ನವನೀತ್ ಗುಂಡೇಟಿಗೆ ಬಲಿಯಾಗುವಾಗ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು. ಅವರಿಗೆ ಗುಂಡು ತಗುಲುತ್ತಿದ್ದಂತೆಯೇ ಟ್ರ್ಯಾಕ್ಟರ್ ಮಗುಚಿದೆ. ನಾನು ಅವರ ಟ್ರ್ಯಾಕ್ಟರ್ ಪಕ್ಕದಲ್ಲೇ ನಡೆದು ಹೋಗುತ್ತಿದ್ದೆ” ಎಂದು ಹೇಳಿದ್ದಾರೆ.
ಟ್ರಾಕ್ಟರ್ ಮಗುಚಿದಂತೆಯೇ ದೆಹಲಿ ಪೊಲೀಸರು ನವನೀತ್ ರ ಮೃತದೇಹವನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸ್ಥಳದಲ್ಲಿ ನೆರೆದಿದ್ದ ಆಕ್ರೋಶಭರಿತ ಪ್ರತಿಭಟನಾಕಾರರು ಮೃತದೇಹವನ್ನು ವಶಕ್ಕೆ ಪಡೆದುಕೊಳ್ಳಲು ಪೊಲೀಸರಿಗೆ ಅವಕಾಶ ಮಾಡಿಕೊಡಲಿಲ್ಲ ಎಂದೂ ಹರ್ಮನ್ಜಿತ್ ತಿಳಿಸಿದ್ದಾರೆ.
ನಾವು ಶಾಂತಿಯುತವಾಗಿ ಸಾಗುತ್ತಿದ್ದ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಆಶ್ರುವಾಯು ಸಿಡಿಸಿದ್ದಾರೆಂದು ಅವರು ಆರೋಪಿಸಿದ್ದಾರೆ.
ಆಂಧ್ರ ಎಜುಕೇಶನ್ ಸೊಸೈಟಿಯ ಎರಡು ಸಿಸಿಟಿವಿಗಳು ಈ ಘಟನೆಯನ್ನು ಸೆರೆಹಿಡಿದಿರುವ ಸಾಧ್ಯತೆ ಇದೆ. ಎಸಿಪಿ HSP ಸಿಂಗ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಕ್ಯಾರವಾನ್ ಹೇಳಿದೆ.