ಜ. 26ರಂದು ದೆಹಲಿಯಲ್ಲಿ ನಡೆಯಲಿರುವ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ರೈತರ ಮೇಲೆ ಹಿಂಸಾತ್ಮಕ ದಾಳಿ ನಡೆಸಲು ಸಂಚು ನಡೆದಿತ್ತು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ. ಶುಕ್ರವಾರ ತಡರಾತ್ರಿ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಯೂನಿಯನ್ ಮುಖಂಡ ಕುಲವಂತ್ ಸಂಧು ಹಾಗೂ ಇತರೆ ರೈತರ ಮುಖಂಡರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ರೈತ ಮುಖಂಡರು ಈ ವಿಚಾರ ಬಹಿರಂಗಪಡಿಸಿದ್ದಾರೆ.
ಹತ್ತು ಮಂದಿಯ ತಂಡವು ಹಿಂಸೆಯನ್ನು ಪ್ರಚೋದಿಸಲು ಮತ್ತು ರೈತ ಮುಖಂಡರನ್ನು ಕೊಲ್ಲಲು ಪೂರ್ವ ನಿಯೋಜಿತರಾಗಿ ಬಂದಿದ್ದರು ಎಂದು ತಂಡದ ಓರ್ವ ಸದಸ್ಯ ತಪ್ಪೊಪ್ಪಿಕೊಂಡಿದ್ದಾನೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗಲಭೆ ಸೃಷ್ಟಿಸಲು ಸುಪಾರಿ ಪಡೆದ ತಂಡದ ಓರ್ವ ರೈತರಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಕೂರಿಸಿಕೊಂಡೇ ರೈತ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿಸಿದ್ದಾರೆ.
ಈ ವೇಳೆ ತನ್ನ ಗುರುತು ಬಹಿರಂಗಪಡಿಸದೆ ಮಾತನಾಡಿದ ಯುವಕ, ರೈತರ ಪರೇಡಿನಲ್ಲಿ ಯಾವ ರೀತಿ ಹಿಂಸಾಚಾರಕ್ಕೆ ಕಾರ್ಯತಂತ್ರ ರೂಪಿಸಲಾಗಿತ್ತು ಎಂದು ಇಂಚಿಂಚು ಮಾಹಿತಿ ಬಹಿರಂಗಪಡಿಸಿದ್ದಾನೆ. “ರೈತರು ಬೀಡು ಬಿಟ್ಟಿರುವ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಇಬ್ಬರು ಯುವತಿಯರು ಸೇರಿದಂತೆ ಹತ್ತು ಮಂದಿಯ ತಂಡ ಸಕ್ರಿಯವಾಗಿ ಓಡಾಡಿಕೊಂಡಿದ್ದಾರೆ” ಎಂಬ ಮಾಹಿತಿ ನೀಡಿದ್ದಾನೆ.
ನಮ್ಮ ಯೋಜನೆ ಜ. 26 ರಂದು ಗಲಭೆ ಸೃಷ್ಟಿಸುವುದು ಎಂಬುವುದನ್ನು ಒಪ್ಪಿಕೊಂಡಿರುವ ಯುವಕ, ಟ್ರಾಕ್ಟರ್ ಪರೇಡನ್ನು ಪೊಲೀಸರು ತಡೆಯುವಾಗ 50- 60 ಜನರು ಪರೇಡ್ನಲ್ಲಿ ಪೊಲೀಸ್ ವೇಷದಲ್ಲಿ, ಹಾಗೂ ಕೆಲವರು ರೈತರಂತೆ ಪಾಲ್ಗೊಂಡು ಗಲಭೆ ಸೃಷ್ಟಿಸುವ ಯೋಜನೆ ರೂಪಿಸಲಾಗಿತ್ತು. ಗಾಳಿಯಲ್ಲಿ ಗುಂಡು ಹಾರಿಸುವುದು, ಲಾಠಿ ಚಾರ್ಜ್ ಮಾಡುವುದು ಯೋಜನೆಯ ಭಾಗವಾಗಿತ್ತು, ಮೊದಲು ಪ್ರತಿಭಟನಾಕಾರರ ಮೊಣಕಾಲಿಗೆ ಗುಂಡು ಹೊಡೆಯಲು ಆದೇಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ದೆಹಲಿ ಪೊಲೀಸರು ನಮ್ಮನ್ನು ತಡೆಯಲು ಯತ್ನಿಸುತ್ತಾರೆ. ನಂತರ ನಮ್ಮ ಹಿಂದಿನಿಂದ ಹತ್ತು ಜನರ ತಂಡವೊಂದು ರೈತರ ಮೇಲೆ ದಾಳಿ ನಡೆಸಬೇಕು ಎಂದು ನಮಗೆ ತಿಳಿಸಲಾಗಿತ್ತು.
ನಮ್ಮದೇ ತಂಡದ ಕೆಲವು ಜನರು ದೆಹಲಿ ಪೊಲೀಸರ ಸಮವಸ್ತ್ರ ಧರಿಸಿ ಪೊಲೀಸರ ಮಧ್ಯೆ ಸೇರಿಕೊಂಡು ರೈತರನ್ನು ಚದುರಿಸುವ ಕೆಲಸ ಮಾಡಬೇಕು. ಪ್ರತಿಭಟನೆಯ ವೇದಿಕೆಯ ಮೇಲೆ ಇರುವ ನಾಲ್ಕು ಜನ ನಾಯಕರನ್ನು ಗುರಿಯಿಟ್ಟು ಕೊಲ್ಲಬೇಕೆಂದು, ಅವರ ಫೋಟೋ ನೀಡಲಾಗಿತ್ತು ಎಂದು ಸುಪಾರಿ ಪಡೆದ ತಂಡದ ಸದಸ್ಯೆ ಹೇಳಿದ್ದಾನೆ. ಯಾರನ್ನು ಕೊಲ್ಲುತ್ತೇವೆ, ಅವರ ಹೆಸರೇನು ಎಂಬುದು ನಮಗೆ ತಿಳಿದಿಲ್ಲ, ಅವರ ಫೋಟೋ ಮಾತ್ರ ನಮಗೆ ನೀಡಲಾಗಿತ್ತು ಎಂದಿದ್ದಾನೆ.
ರಾಯ್ ಪೊಲೀಸ್ ಠಾಣೆಯ ಅಧಿಕಾರಿ ಪರ್ದೀಪ್ ಎಂಬ ಅಧಿಕಾರಿ ನಮಗೆ ಯೋಜನೆಯ ರೂಪುರೇಷೆಗಳನ್ನು ನೀಡುತ್ತಿದ್ದರು. ಅವರ ಮುಖ ನೋಡಿಲ್ಲ, ಆದರೆ ಅವರ ಬ್ಯಾಡ್ಜ್ನಿಂದ ಅವರ ಹೆಸರು ತಿಳಿಯಿತು ಎಂದು ಅವನು ಹೇಳಿದ್ದಾರೆ.
ಈ ಹಿಂದೆ ಕರ್ನಾಲ್ನಲ್ಲಿ ನಡೆದ ರೈತ ಹೋರಾಟದಲ್ಲಿ ಭಾಗಿಯಾಗಿ, ರೈತರ ಮೇಲೆ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿರುವ ಯುವಕ, ಹಣಕ್ಕಾಗಿ ಈ ಕೆಲಸ ಒಪ್ಪಿಕೊಂಡಿರುವುದಾಗಿ ಹೇಳಿದ್ದಾನೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಸರಿಯಲ್ಲ. ಇದು ಕಾಂಗ್ರೆಸ್ ಪ್ರೇರಿತ ಹೋರಾಟ. ಇದನ್ನು ತಡೆದು ನಿಲ್ಲಿಸಲು ನಮಗೆ ಹೇಳಲಾಗಿತ್ತು. ಲ್ಯಾಂಡ್ಲೈನ್ ಮೂಲಕ ನಮಗೆ ಸೂಚನೆಗಳು ಬರುತ್ತಿದ್ದವು. ಅದರಂತೆ ನಾವು ಕೆಲಸ ಮಾಡುತ್ತಿದ್ದೆವು ಎಂದು ಯುವಕ ತಿಳಿಸಿದ್ದಾನೆ.
ಶುಕ್ರವಾರ ಸಂಜೆ ವೇಳೆ ಯುವಕ ರೈತರ ಕೈಗೆ ಸಿಕ್ಕಿಬಿದ್ದಿದ್ದು, ಸದ್ಯ ಆತನನ್ನು ಹರ್ಯಾಣ ಪೊಲೀಸರ ವಶಕ್ಕೆ ನೀಡಲಾಗಿದೆ.