ಮೈಸೂರು: ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿಧಾನ ಪರಿಷತ್‌ನಲ್ಲಿ ಮಹಿಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಹೊಲಸು ಭಾಷೆ ಬಳಸಿ ನಿಂದಿಸಿದ ಭಾಜಪ ನಾಯಕ ಸಿ.ಟಿ.ರವಿ ವಿರುದ್ಧ ಪ್ರತಿಭಟನೆ ನಡೆಸಲು ಪ್ರಗತಿಪರ ಸಂಘಟನೆಗಳು ನಿರ್ಣಯ ಕೈಗೊಂಡಿವೆ.
ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ ೭ರ ಮಂಗಳವಾರ ಬೆಳಗ್ಗೆ ಚಿಕ್ಕಗಡಿಯಾರದ ಮುಂಭಾಗ ಕಪ್ಪು ಬಟ್ಟೆ ಧರಿಸಿ ಮುಷ್ಕರ ನಡೆಸಲಾಗುವುದಲ್ಲದೇ, ಹೋರಾಟದ ಹಾಡುಗಳು ಹಾಗೂ ಬೀದಿನಾಟಕದ ಮೂಲಕವೂ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಕೋಮುವಾದಿ ಭಾರತೀಯ ಜನತಾ ಪಕ್ಷವು ಮತ್ತು ಜನತಾ ಪಕ್ಷದ ನಾಯಕರುಗಳು ಎಗ್ಗಿಲ್ಲದ ಹಾಗೇ ವರ್ತಿಸುತ್ತಿರುವುದು, ಸಂವಿಧಾನ ಬಾಹಿರ ನಡವಳಿಕೆಗಳನ್ನು ಪ್ರದರ್ಶಿಸುತ್ತಿರುವುದು ಹಾಗೂ ಸಂವಿಧಾನ ಪಿತಾಮಹ ಅಂಬೇಡ್ಕರ್ ಅವರನ್ನು ಅತ್ಯಂತ ಹೀನಾಯವಾಗಿ ಅಗೌರವಿಸಿರುವ ಸಂಗತಿಗಳನ್ನು ಸಭೆಯಲ್ಲಿ ಕಟುವಾಗಿ ಖಂಡಿ ಸಲಾಯಿತು.
ವಿಧಾನ ಪರಿಷತ್‌ನಂತಹ ಬುದ್ದಿಜೀವಿಗಳು ಇರಬೇಕಾದ ಸ್ಥಳದಲ್ಲಿ ಸಿ.ಟಿ. ರವಿಯಂತಹ ಲಾಭಕೋರ ರಾಜಕಾರಣಿಗಳು ಜಾಗ ಗಿಟ್ಟಿಸಿರುವುದರಿಂದಾಗಿ ಅಸಹ್ಯಕಾರಿ ಘಟನೆಗಳಿಗೆ ಪರಿಷತ್ ವೇದಿಕೆಯಾಗುತ್ತಿರುವ ಬಗ್ಗೆಯೂ ಸಭೆಯಲ್ಲಿ ಬೇಸರ ವ್ಯಕ್ತಪಡಿಸಲಾಯಿತು.
ಶ್ರೀಮತಿ ಲಕ್ಷ್ಮಿಹೆಬ್ಬಾಳ್ಕರ್ ಮಂತ್ರಿ ಎಂಬ ಕಾರಣ ಮುಖ್ಯವಾಗದಿದರೂ, ಓರ್ವ ಮಹಿಳೆ ಎಂಬ ಹಿನ್ನಲೆಯಿಂದ ಗೌರವಯುತವಾಗಿ ನಡೆದು ಕೊಳ್ಳಬೇಕಿದ್ದ ಸಿ.ಟಿ. ರವಿ,ಸಮಾಜ ನಾಚುವಂತಹ ಶಬ್ದವನ್ನು ಬಳಸಿದ್ದು ಹೇಯ ಎಂಬ ಅಭಿಪ್ರಾಯವೂ ಸಭೆಯಲ್ಲಿ ಪ್ರತಿಧ್ವನಿಗೊಂಡಿತು.
ಜನವರಿ 7 ರ ಮಂಗಳವಾರ ನಡೆಯಲಿರುವ ಈ ಸಭೆಗೆ ಯುವಜನರು, ಮಹಿಳೆಯರು, ಎಲ್ಲ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಯಿತು.
ಸಭೆಯಲ್ಲಿ ಜಿ.ಜಯರಾಮ್, ಎಂ.ಎಸ್.ಖಲೀಂ, ಪಂಡಿತಾರಾದ್ಯ, ಜಿ.ಪಿ.ಬಸವರಾಜು, ಸವಿತ ಪ.ಮಲ್ಲೇಶ್, ಲೀಲಾ ವೆಂಕಟೇಶ್, ಎನ್.ಎಸ್.ಗೋಪಿನಾಥ, ಎನ್.ಎಸ್.ವೇಣುಗೋಪಾಲ್, ಟಿ.ಗುರುರಾಜ್, ನಂಜನರಾಜ ಅರಸು, ಪಿ.ರಾಜು, ಡಾ.ನಟರಾಜ್ ಶಿವಣ್ಣ,, ಡಿ.ಜಗನ್ನಾಥ, ಎಸ್.ರಾಮು (ರಂಗಾಯಣ), ನವೀನ್, ಸಬಿಹಾ ಭೂಮಿಗೌಡ, ಪ್ರೊ. ಭೂಮಿಗೌಡ, ಜನಮನ ಕೃಷ್ಣ, ದಿನಮಣಿ, .ಶಿಲ್ಪಾ, ವರಹಳ್ಳಿ ಆನಂದ, ಡಾ. ಮಹೇಶ ದಳಪತಿ, ಚೌಡಹಳ್ಳಿ ಜವರಯ್ಯ ಮತ್ತಿತರರು ಉಪಸ್ಥಿತರಿದ್ದರು.