ಅವಳಿ ನಗರಗಳ ಅಭಿವೃದ್ಧಿಗೆ ಅಧಿಕಾರಿಗಳು ಆದ್ಯತೆ ನೀಡಲಿ
ಹುಬ್ಬಳ್ಳಿ, ಜುಲೈ, 30: ಹುಬ್ಬಳ್ಳಿ ಧಾರವಾಡ ನಗರಗಳು ಮಾದರಿ ನಗರಗಳಾಗಬೇಕು. ಆ ನಿಟ್ಟಿನಲ್ಲಿ ಅವಳಿ ನಗರಗಳನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ಐಟಿ ಪಾರ್ಕ್‌ನಲ್ಲಿರುವ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಸಭಾಂಗಣದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ 20 ವರ್ಷಗಳಲ್ಲಿ ಅವಳಿ ನಗರಗಳು ಹೇಗೆ ಅಭಿವೃದ್ಧಿಯಾಗಬೇಕು ಎಂಬುದರ ಕುರಿತು ಯೋಜನೆ ರೂಪಿಸಬೇಕು. ನಗರಗಳಲ್ಲಿ ಉತ್ತಮ ಕಾಮಗಾರಿಗಳು ನಡೆಯಬೇಕು. ಯಾವುದೇ ರೀತಿಯಲ್ಲಿ ಕಳಪೆ ಕಾಮಗಾರಿಗಳಿಗೆ ಅವಕಾಶ ನೀಡಬಾರದು. ಬೇರೆ ಬೇರೆ ರಾಷ್ಟ್ರಗಳನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದರ ಬಗ್ಗೆ ಅಧಿಕಾರಿಗಳು ಅಧ್ಯಯನ ನಡೆಸಬೇಕಾಗಿದೆ. ಅಲ್ಲದೇ ಇಂದಿನ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು. ಕೈಗಾರಿಕೋದ್ಯಮ ಮತ್ತು ವ್ಯಾಪಾರ ವಹಿವಾಟು ಹೆಚ್ಚಾದಾಗ ಮಾತ್ರ ನಗರಗಳು ಅಭಿವೃದ್ಧಿ ಹೊಂದಲಿವೆ. ಆ ನಿಟ್ಟಿನಲ್ಲಿ ಸಂಪನ್ಮೂಲಗಳ ಬಳಕೆಗೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.
ಸಾರ್ವಜನಿಕರಿಗೆ ಕುಡಿಯುವ ನೀರು, ವಿದ್ಯುತ್, ಸಾರಿಗೆ ಸೇರಿದಂತೆ ವಿವಿಧ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ನಗರ ಪ್ರದೇಶಗಳಲ್ಲಿನ ಕೊಳೆಗೇರಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವ ಜನರಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಕುರಿತು ಅಧಿಕಾರಿಗಳು ಸ್ಲಂ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಘನ ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಹೆಚ್ಚಿನ ಗಮನ ಹರಿಸಬೇಕು. ಪಾಲಿಕೆಯ ಅಧಿಕಾರಿಗಳು ಸರ್ಕಾರದ ಜಾಗಗಳ ಅತಿಕ್ರಮಣವಾಗಿರುವುದರ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಒಂದು ವೇಳೆ ಸರ್ಕಾರದ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದರೆ ನೋಟೀಸ್ ಜಾರಿ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಮಹಾಪೌರರಾದ ರಾಮಣ್ಣ ಬಡಿಗೇರ, ಉಪಮಹಾಪೌರರಾದ ದುರ್ಗಮ್ಮ ಬೀಜವಾಡ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ, ಪಾಲಿಕೆಯ ಸದಸ್ಯರು, ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.