ಬೆಳಗಾವಿ: ನಟೋರಿಯಸ್ ಪಾತಕಿಯೊಬ್ಬ ಪಾಕ್ ಪರ ಘೋಷಣೆ ಕೂಗಿ, ಧರ್ಮದೇಟು ತಿಂದಿದ್ದಾನೆ.
ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಎಂಬಾತನೇ ಜಿಲ್ಲಾ ನ್ಯಾಯಾಲಯದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾನೆ. ಈ ಸಂದರ್ಭದಲ್ಲಿ ಅಲ್ಲಿದ್ದ ವಕೀಲರು ಹಾಗೂ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದ್ದಾರೆ. ಈ ವೇಳೆ ಪೊಲೀಸರು ಆತನನ್ನು ರಕ್ಷಿಸಿ, ಠಾಣೆಗೆ ಕರೆದೊಯ್ದಿದ್ದಾರೆ.
ಈತ ಇತ್ತೀಚೆಗಷ್ಟೇ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ (Alok Kumar) ಅವರಿಗೆ ಜೀವ ಬೆದರಿಕೆ ಹಾಕಿದ್ದ. ಸದ್ಯ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆತನನ್ನು ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ ಪಾಕ್ ಪರ ಘೋಷಣೆ ಕೂಗಿದ್ದಾನೆ.
ಈತನ ಮೇಲೆ ವಿವಿಧ ಪ್ರಕರಣಗಳಿವೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಕರೆ ಮಾಡಿ, 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ಕರಣದ ತನಿಖೆ ನಡೆಸಿದ್ದರು.
ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಎಂಬಾತನೇ ಈತ. ಈತನಿಗೆ ಭಯೋತ್ಪಾದಕ ಅಫ್ಸರ್ ಪಾಷಾ ಜೊತೆ ನಂಟಿರುವುದು ಕೂಡ ಪತ್ತೆಯಾಗಿತ್ತು.