ಬೆಂಗಳೂರು: ಥಗ್ ಲೈಫ್ ಚಿತ್ರದ ಆಡಿಯೋ ಬಿಡುಗಡೆ ವೇಳೆ ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವ ಹೇಳಿಕೆ ನೀಡಿದ್ದ ನಟ ಕಮಲ್ ಹಾಸನ್ ಅವರ ಯಾವ ಸಿನಿಮಾ ಕೂಡ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ.

ಕಮಲ್ ಹಾಸನ್ ಅವರ ಹುಟ್ಟುಹಬ್ಬದ ಅಂಗವಾಗಿ ನಾಯಕನ್ ಚಿತ್ರವನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಈ ಸಿನಿಮಾವನ್ನು ಕರ್ನಾಟಕದಲ್ಲಿ ರೀ-ರಿಲೀಸ್ ಮಾಡಬಾರದು ಎಂದು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಓರಾಯನ್ ಮಾಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಮಣಿದ ಮಾಲ್ ಆಡಳಿತ ಮಂಡಳಿ ನಾಯಕನ್ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಮಾತನಾಡಿದ್ದು, ತಮಿಳು ನಟನ ಚಿತ್ರ ಬಿಡುಗಡೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಲ್ಲ. ಸುಪ್ರೀಂಕೋರ್ಟ್‌ಗೆ ಹೋದರು, ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆಯಾಗಲಿಲ್ಲ. ಈಗ ನಾಯಕನ್ ಚಿತ್ರ ಬಿಡುಗಡೆಗೆ ಮುಂದಾಗಿರುವುದನ್ನು ಖಂಡಿಸುತ್ತೇವೆ. ಚಿತ್ರ ಮಂದಿರದ ಮಾಲೀಕರು ಸಹ ಈ ಚಿತ್ರವನ್ನು ಬಿಡುಗಡೆಗೆ ಮಾಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ಮಾಡದೇ ಇರಲು ನಿರ್ಧರಿಸಿರುವ ಚಿತ್ರ ಮಂದಿರದ ಮಾಲೀಕರಿಗೆ ಧನ್ಯವಾದಗಳು ಎಂದಿದ್ದಾರೆ.







