ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು (ಶನಿವಾರ) ಲಖನೌನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸಚಿವ ಅಜಯ್ ಮಿಶ್ರಾ ‘ತೇನಿ’ ಅವರೊಂದಿಗೆ ವೇದಿಕೆ ಹಂಚಿಕೊಳ್ಳದಂತೆ ಒತ್ತಾಯಿಸಿದ್ದಾರೆ. ಮಿಶ್ರಾ ಅವರನ್ನು ವಜಾಗೊಳಿಸುವಂತೆಯೂ ಅವರು ಒತ್ತಾಯಿಸಿದ್ದಾರೆ. ಡಿಜಿಪಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಲಖನೌಗೆ ಬಂದಿದ್ದಾರೆ.
ಲಖಿಂಪುರ ಖೇರಿಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಜಯ್ ಮಿಶ್ರಾ ಅವರ ಪುತ್ರನನ್ನು ಬಂಧಿಸಲಾಗಿದೆ. ಹೀಗಾಗಿ ಆರೋಪಿಯ ತಂದೆ ಜೊತೆ ವೇದಿಕೆ ಹಂಚಿಕೊಳ್ಳಬಾರದು ಮತ್ತು ಸಚಿವ ಅಜಯ್ ಮಿಶ್ರಾ ಅವರನ್ನು ವಜಾ ಮಾಡಬೇಕು ಎಂದು ಪ್ರಿಯಾಂಕಾ ಮನವಿ ಮಾಡಿದ್ದಾರೆ.
“ರೈತರ ಬಗ್ಗೆ ನಿಮ್ಮ ಉದ್ದೇಶಗಳು ಸ್ಪಷ್ಟವಾಗಿದ್ದರೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಬೇಡಿ. ಅವರನ್ನು ವಜಾಗೊಳಿಸಿ,” ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಪ್ರಿಯಾಂಕಾ ಹೇಳಿದ್ದಾರೆ. ದೇಶದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ತಮ್ಮ ಸರ್ಕಾರ ರದ್ದುಗೊಳಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ ಒಂದು ದಿನದ ನಂತರ ಪ್ರಿಯಾಂಕಾ ಪತ್ರ ಬಂದಿದೆ.

ಅಕ್ಟೋಬರ್ 3 ರಂದು ಲಖಿಂಪುರದಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದರು. ಸಾವಿಗೆ ಸಂಬಂಧಿಸಿದಂತೆ ಬಂಧಿತರಾದ 13 ಮಂದಿಯಲ್ಲಿ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಸೇರಿದ್ದಾರೆ. ಅಜಯ್ ಮಿಶ್ರಾ ಒಡೆತನದ ಮಹೀಂದ್ರಾ ಥಾರ್ ಎಸ್‌ಯುವಿ ಸೇರಿದಂತೆ ಮೂರು ವಾಹನಗಳ ಬೆಂಗಾವಲು ಪಡೆಯಿಂದ ಎಲ್ಲಾ ಸಂತ್ರಸ್ತರನ್ನು ಹೊಡೆದುರುಳಿಸಲಾಗಿದೆ. ಘಟನೆಯ ವೇಳೆ ಗುಂಡು ಹಾರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದಾಗ್ಯೂ, ಶವಪರೀಕ್ಷೆಗಳು ಐವರಲ್ಲಿ ಯಾರಿಗೂ – ಅಥವಾ ಆ ದಿನದ ನಂತರದ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಇತರ ಮೂವರಿಗೆ – ಗುಂಡೇಟಿನಿಂದ ಗಾಯವಾಗಿಲ್ಲ ಎಂದು ದೃಢಪಡಿಸಿದೆ.
ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಪಡಿಸಿಕೊಂಡಿರುವ ಆರೋಪಿಗಳಿಗೆ ಸೇರಿದ ನಾಲ್ಕು ಶಸ್ತ್ರಾಸ್ತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಪರಿಶೀಲಿಸಿದೆ. ಇವುಗಳಲ್ಲಿ ಮೂರು ಆಯುಧಗಳು ಅಜಯ್ ಮಿಶ್ರಾ ಪುತ್ರ ಆಶೀಸ್ ಮತ್ತು ಇತರ ಬಿಜೆಪಿ ನಾಯಕರ ಸಂಬಂಧಿಗಳಿಗೆ ಸೇರಿವೆ ಎಂದು ಕಂಡುಬಂದಿದೆ.
ಎಫ್‌ಎಸ್‌ಎಲ್ ವರದಿಯಲ್ಲಿ ಬುಲೆಟ್‌ಗಳನ್ನು ಯಾವಾಗ ಹಾರಿಸಲಾಗಿದೆ ಎಂದು ಹೇಳಿಲ್ಲವಾದರೂ, ಆರೋಪಿಗಳು ಅಕ್ಟೋಬರ್ 3 ರಂದು ಶಸ್ತ್ರಾಸ್ತ್ರಗಳನ್ನು ಹಾರಿಸಿಲ್ಲ ಎಂಬುದಕ್ಕೆ ಈಗ ಪುರಾವೆಗಳನ್ನು ಒದಗಿಸಬೇಕು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಏತನ್ಮಧ್ಯೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ರಾಕೇಶ್ ಕುಮಾರ್ ಜೈನ್ ಅವರನ್ನು ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನೇಮಿಸಿದೆ.