ಬೆಂಗಳೂರು: ಮಹಾಭಾರತದಲ್ಲಿ ಬಕಾಸುರನಿಗೆ ಎಷ್ಟು ಕೊಟ್ಟರೂ ತಿನ್ನುತ್ತಿದ್ದನಂತೆ. ಅದೇ ರೀತಿ ಈ 40% ಸರ್ಕಾರ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ಇವರು ಜನರ ಹಣ ಹಾಗೂ ಜೀವನವನ್ನೇ ನುಂಗುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾರ್ಮಿಕ ಇಲಾಖೆಯ ಟೆಂಡರ್ ದಾಖಲೆಯಲ್ಲಿ, ‘ಯಾರು ಈ ಟೆಂಡರ್ ಪಡೆಯುತ್ತಾರೋ ಅವರೇ ಮೂರನೇ ವ್ಯಕ್ತಿ ನೇಮಿಸಿ ಸಮೀಕ್ಷೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿಸಿ ಆ ಬಗ್ಗೆ ಸರ್ಕಾರಕ್ಕೆ ಪತ್ರ ನೀಡಬೇಕು’ ಎಂದು ತಿಳಿಸಲಾಗಿದೆ. ಶಾಲಾ ಕಿಟ್ ಗಳನ್ನು ಕಾರ್ಮಿಕರ ಮಕ್ಕಳ ಪೈಕಿ 5ನೇ ತರಗತಿಯವರಿಗೆ ಮೊದಲು ನೀಡಿ, ನಂತರ ಉಳಿದರೆ 4,3,2,1ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದೆ. ಸರ್ಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟು ಜನ ನೊಂದಾಯಿತ ಕಾರ್ಮಿಕ ಮಕ್ಕಳಿದ್ದಾರೆ ಎಂಬ ಅಂಕಿ ಅಂಶಗಳು ಇಲ್ಲ. ಸಮೀಕ್ಷೆ ನಡೆಸದೇ, ಅಂಕಿ ಅಂಶಗಳು ಇಲ್ಲದೇ ಈ ಟೆಂಡರ್ ಕರೆದಿದ್ದಾರೆ. ಇದು ಆಡಳಿತ ನಡೆಸುವ ರೀತಿಯೇ? ಇದು ಕಾರ್ಮಿಕರ ಅಭಿವೃದ್ಧಿಗೆ ತೆಗೆದುಕೊಂಡಿರುವ ತೀರ್ಮಾನವೇ? ಈ ಇಲಾಖೆ ಕಾರ್ಮಿಕರ ಏಳಿಗೆಗಾಗಿ ಏನು ಮಾಡುತ್ತಿದ್ದಾರೆ? ಎಂದು ಹರಿಹಾಯ್ದಿದ್ದಾರೆ.
ಇವು ಸ್ಕೂಲ್ ಕಿಟ್ ಅಲ್ಲ, ಬಿಜೆಪಿ ಭ್ರಷ್ಟಾಚಾರದ ಟೂಲ್ ಕಿಟ್

ಇವರು ಶಾಲಾ ಮಕ್ಕಳಿಗೆ ಕಿಟ್ ನೀಡುವುದಾದರೆ, ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಈ ಸರ್ಕಾರದ ಯೋಗ್ಯತೆಗೆ ಈವರೆಗೂ ಸರಿಯಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡಲು ಆಗಿಲ್ಲ. ಇವು ಸ್ಕೂಲ್ ಕಿಟ್ ಅಲ್ಲ ಬಿಜೆಪಿ ಭ್ರಷ್ಟಾಚಾರದ ಟೂಲ್ ಕಿಟ್ ಆಗಿದೆ. ಇವರು ಕಾರ್ಮಿಕರ ಪರವಾಗಿದ್ದರೆ ಈ ಕಿಟ್ ತರೆಸಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆ ಏನು ಎಂದು ಪರಿಶೀಲಿಸಿ. ಇಲ್ಲಿ ಯಾವುದೇ ಉನ್ನತ ಮಟ್ಟದ ತನಿಖೆ ಅಗತ್ಯವೇ ಇಲ್ಲ. ಇಲ್ಲಿ ಉಪಕರಣಗಳ ಬೆಲೆ ದುಪ್ಪಟ್ಟಾಗಿದ್ದರೆ ನೀವು ರಾಜೀನಾಮೆ ನೀಡುತ್ತೀರಾ? ಎಂದು ಪ್ರಶ್ನಿಸಿದರು.
ಕಾರ್ಮಿಕ ಇಲಾಖೆಯಲ್ಲಿ ಹಗರಣದ ದಾಖಲೆ ಬಿಡುಗಡೆ
ಕಾರ್ಮಿಕರ ಇಲಾಖೆಯಲ್ಲಿ 7-8 ಸಾವಿರ ಕೋಟಿ ಅವ್ಯವಹಾರ ನಡೆದಿದ್ದು, ಅದರ ಮೊದಲ ಭಾಗ ಈ ಹಗರಣವಾಗಿದೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ದಾಖಲೆ ಕೇಳುತ್ತಾರೆ. ನಾವು ಇಂದು ದಾಖಲೆ ಸಮೇತ ಎಲ್ಲಾ ವಿಚಾರ ನಿಮ್ಮ ಮುಂದಿಡುತ್ತೇವೆ ಎಂದು ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸೆಸ್ ಅನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ಮಾತ್ರ ವಿನಿಯೋಗಿಸಬೇಕು. ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಸುಮಾರು 2500 ಕೋಟಿ ವಾರ್ಷಿಕವಾಗಿ ಸೆಸ್ ಸಂಗ್ರಹವಾಗುತ್ತದೆ. ಇನ್ನು ಈ ಇಲಾಖೆ ಇಟ್ಟಿರುವ ಠೇವಣಿಗೆ ಬಡ್ಡಿಯೇ ವಾರ್ಷಿಕ 350 ಕೋಟಿ ಸಿಗುತ್ತಿದೆ. 2020-21, 2021-22ರಲ್ಲಿ ಕಾರ್ಮಿಕರ ಉಪಯೋಗಕ್ಕಾಗಿ ಕಿಟ್ ವಿತರಣೆ ನೀಡುವ ಯೋಜನೆ ರೂಪಿಸುತ್ತಾರೆ. ಇದರ ಭಾಗವಾಗಿ 2.67,556 ಕಿಟ್ ನೀಡಿದ್ದಾರೆ. ರಾಜ್ಯದಲ್ಲಿ ಐದು ವಿಭಾಗವಾಗಿ ಮಾಡಿ ಕಿಟ್ ಹಂಚಿದ್ದಾರೆ. 2020-21ನೇ ಸಾಲಿನಲ್ಲಿ 6 ಕಿಟ್ ನೀಡಲು ನಿರ್ಧರಿಸುತ್ತಾರೆ. 5625 ಬಾರ್ ಬೆಂಡಿಂಗ್ ಕಿಟ್, 5600 ಕಾರ್ಪೆಂಟರಿ, 4625 ಎಲೆಕ್ಟ್ರೀಷಿಯನ್, 8605 ಪೇಂಟಿಂಗ್, 5203 ಪ್ಲಂಬಿಂಗ್, 96,000 ಮೆಷನರಿ ಕಿಟ್ ನೀಡಲು ನಿರ್ಧರಿಸುತ್ತಾರೆ. ಒಟ್ಟು 49.94 ಕೋಟಿ ಹಣ ವಿನಿಯೋಗ ಮಾಡಿರುತ್ತಾರೆ. ನಂತರ 2021-22ನೇ ಸಾಲಿನಲ್ಲಿ ಈ ಐದು ವಿಭಾಗಗಳಲ್ಲಿ 2,67,556 ಟೂಲ್ ಕಿಟ್ ಖರೀದಿ ಮಾಡಿದ್ದು ಇದಕ್ಕೆ 133 ಕೋಟಿ ಹಣ ವಿನಿಯೋಗ ಮಾಡಿದೆ.

ಇದಾದ ನಂತರ 2022-23ನೇ ಸಾಲಿನಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳಿಗೆ 1-5ನೇ ಹಂತದ ಮಕ್ಕಳಿಗೆ ಒಂದು ಟೂಲ್ ಕಿಟ್ 6-8ನೇ ತರಗತಿ ಮಕ್ಕಳಿಗೆ ಮತ್ತೊಂದು ಕಿಟ್ ನೀಡಿದ್ದಾರೆ. 1-5ನೇ ತರಗತಿ ಮಕ್ಕಳಿಗೆ ನೀಡಿರುವ ಟೂಲ್ ಕಿಟ್ ನಲ್ಲಿ 35 ಸಾಮಾಗ್ರಿಗಳನ್ನು ನೀಡಿದ್ದು, ಒಂದೊಂದು ವಿಭಾಗದಲ್ಲೂ ಈ ಕಿಟ್ ಮೌಲ್ಯ ಬೇರೆ ಬೇರೆ ಇದೆ. 1-5ನೇ ತರಗತಿ ಮಕ್ಕಳ ಕಿಟ್ ಗೆ 38.47 ಕೋಟಿ ಹಣ ನೀಡಿದೆ. 6-8ನೇ ತರಗತಿ ಕಿಟ್ ಗೆ 27.80 ಕೋಟಿ ಹಣ ನೀಡಿದೆ. ಒಟ್ಟು 250 ಕೋಟಿ ಹಣವನ್ನು ಕಿಟ್ ಗಳಿಗೆ ವಿನಿಯೋಗಿಸಿದ್ದಾರೆ.
ಮಾರುಕಟ್ಟೆಯಲ್ಲಿ ಒಂದು ಪೆನ್ಸಿಲ್ ಬಾಕ್ಸ್ ಮೌಲ್ಯ 100 ರೂ. ಇದ್ದರೆ, ಇವರು 200 ರೂ. ಹಾಕಿದ್ದಾರೆ. ಇವರು ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಕಿಟ್ ಮೌಲ್ಯ 3650 ರೂ. ಆಗಿದೆ. ಆದರೆ ಇವರು 7300ರಿಂದ 9000ದ ವರೆಗೆ ದಾಖಲು ಮಾಡಿದ್ದಾರೆ. ಇನ್ನು ಉಳಿದ ಎಲೆಕ್ಟ್ರಿಟಿಷಿಯನ್ ಉಪಕರಣ 6904 ರೂ. ನಿಗದಿ ಮಾಡಿದ್ದು, ಇದರಲ್ಲಿ ಇರುವ ವಸ್ತುಗಳ ಬೆಲೆ 2960 ರೂ ಮೌಲ್ಯದ್ದಾಗಿದೆ. ಮಕ್ಕಳು ಹಾಗೂ ಕಾರ್ಮಿಕರಿಗೆ ನೀಡಿರುವ ಕಿಟ್ ಗಳಲ್ಲೂ ಇವರು ಅಕ್ರಮ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ದಾಖಲೆ ಕೇಳುವ ಸಿಎಂ ಬೊಮ್ಮಾಯಿ ಅವರು ಸಮಯಾವಕಾಶ ಕೊಟ್ಟರೆ ಈ ದಾಖಲೆಗಳನ್ನು ಅವರ ಕಚೇರಿ, ನಿವಾಸಕ್ಕೆ ಹೋಗಿ ನೀಡಲು ಸಿದ್ಧವಿದ್ದೇವೆ. ಈ ಕಿಟೆ ದರ ಎಷ್ಟಿದೆ, ಇಲ್ಲಿ ಕಮಿಷನ್ ಎಷ್ಟು ಪಡೆಯಲಾಗಿದೆ ಎಂದು ಅವರೇ ಪರಿಶೀಲಿಸಿ ಹೇಳಲಿ ಎಂದು ಒತ್ತಾಯಿಸಿದರು.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ.
ಸರ್ಕಾರ ಕಳಪೆ ಗುಣಮಟ್ಟದ ಉಪಕರಣ ನೀಡಿ, ದುಪ್ಪಟ್ಟು ಹಣ ನಿಗದಿ ಮಾಡಿದ್ದಾರೆ. ಇದು 70% – 80% ರಷ್ಟು ಕಮಿಷನ್ ಹಗರಣವಾಗಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಒತ್ತಾಯಿಸಿದರು.
ಆರೋಗ್ಯ ಶಿಬಿರ ಹೆಸರಲ್ಲಿ ಹಗರಣ ಮಾಡುತ್ತಿದ್ದಾರೆ. ಒಂದು ಪರೀಕ್ಷೆಗೆ 9 ಸಾವಿರ ನಿಗದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಇವರ ಅಕ್ರಮಗಳನ್ನು ಬಯಲು ಮಾಡುತ್ತೇವೆ ಎಂದು ಹೇಳಿದರು.
ನ್ಯಾಯ ಸಿಗದಿದ್ದರೆ ಕಾನೂನು ಹೋರಾಟ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣದ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದೇವೆ. ಈ ಪ್ರಕರಣದಲ್ಲೂ ನಾವು ನ್ಯಾಯಕ್ಕಾಗಿ ಕಾದು ನೋಡುತ್ತೇವೆ. ನ್ಯಾಯ ಸಿಗದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಈ ಸರ್ಕಾರದಲ್ಲಿ ಸಮಬಾಳು ಸಮಪಾಲು ಎಂಬಂತೆ ವ್ಯಾಪಾರ ಸೌಧದಲ್ಲಿ ಸಚಿವರುಗಳು ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ. ಮಂತ್ರಿಗಳ ಅನುಮತಿ ಇಲ್ಲದೆ ತಿದ್ದುಪಡಿ ಮಾಡಲು ಸಾಧ್ಯವೇ?’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.