ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಎಷ್ಟು ಸೀಟ್ ಗೇಲ್ತೇವೆ ಎಂದು ನಾನು ಹೇಳಲ್ಲ. ಈಗ ಹೇಳಿದರೆ ಬಿಜೆಪಿಯವರು 20 ಚೆಕ್ ಈಗಲೇ ಬರೆದಿಡ್ತಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.
ಶಿವಮೊಗ್ಗದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಇಲ್ಲವಾಗಿದೆ. ಸೊರಬದಲ್ಲಂತೂ ಸ್ಮಶಾನ ಸೇರಿದೆ. ಸೊರಬದಲ್ಲಿ ಕಾಂಗ್ರೆಸ್ ಪರ ವಾತವರಣ ತುಂಬಾ ಚೆನ್ನಾಗಿದೆ. ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮನೆಮನೆಗೆ ತಲುಪಿಸುವ ಕೆಲಸ ಮಾಡ್ತಾ ಇದ್ದೇವೆ. ರಾಜ್ಯದ ದಿಕ್ಕು ಬದಲಿಸುವ ಹಕ್ಕು ಜನರಿಗಿದೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಪಕ್ಷ ಹಲವು ಜವಾಬ್ದಾರಿ ನೀಡಿದ್ದು, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು.
ಶಿವಮೊಗ್ಗದಲ್ಲಿ ಜನರ ತೆರಿಗೆ ದುಡ್ಡಲ್ಲಿ ಏರ್ಫೊರ್ಟ್ ಕಟ್ಟಿದ್ದಾರೆ. ಪ್ರಧಾನಿಯವರೇ ಬಂದು ಉದ್ಘಾಟಿಸಿದ್ದು, ಸ್ವಾಗತ ಮಾಡ್ತೇನೆ. ಕೆಲವೇ ವರ್ಷದಲ್ಲಿ ಏರ್ಪೋರ್ಟ್ ಅನ್ನು ಅದಾನಿಗೆ ಪ್ರಧಾನಿಯವರು ಕೊಟ್ಟರು ಕೊಡಬಹುದು ಎಂದ ಅವರು, ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟ ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರ ಪ್ರಸ್ತಾಪಿಸಲಿಲ್ಲ. ಶರಾವತಿ ಸಂತ್ರಸ್ತರ ತ್ಯಾಗದ ಕರೆಂಟ್ ಬಳಸಿ, ಮೈಕ್’ನಲ್ಲಿ ಮಾತನಾಡಿ, ಚಕಾರ ಎತ್ತಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೇ ಸಮಸ್ಯೆ ಬಗೆಹರಿಸುವ ವಾಗ್ದಾನ ಮಾಡಿದ್ದಾರೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಆ ಪ್ರಯತ್ನ ಮಾಡಿದ್ದರು. ಮುಂದೆ ನಾವು ಬಗೆಹರಿಸುತ್ತೇವೆ ಎಂದರು.

ಜಾತಿ, ಧರ್ಮ, ಸಾವಿನಲ್ಲಿ ರಾಜಕೀಯ ಮಾಡ್ತಾರೆ
ಬಿಜೆಪಿ ಕಾರ್ಯಕರ್ತ ಮಲ್ಲಿಕಾರ್ಜುನ್ ಅಸುನೀಗಿದ್ದು, ಏರ್ಫೊರ್ಟ್ ಕಾರ್ಯಕ್ರಮದಲ್ಲಿ ಅವರಿಗೆ ಪರಿಹಾರ ನೀಡಲಿಲ್ಲ. ಕೊನೆಪಕ್ಷ ಸಾಂತ್ವಾನ ಹೇಳಿಲ್ಲ. ಜಾತಿ, ಧರ್ಮ, ಸಾವು ಹಾಗೂ ಪರ್ಸೆಂಟೇಜ್ ವಿಚಾರದಲ್ಲಿ ರಾಜಕೀಯ ಮಾಡ್ತಾರೆ ಎಂದು ಕಿಡಿಕಾರಿದರು.
ಶಿವಮೊಗ್ಗ- ಶಿಕಾರಿಪುರ- ರಾಣೆಬೇನ್ನೂರು ರೈಲ್ವೆ ಯೋಜನೆ ಮಾಡ್ತಿದ್ದಾರೆ. ರೈತರ ಜಮೀನಿನಲ್ಲಿ ಕೆಲಸ ಮಾಡುವ ಮುನ್ನ ಅವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ವಿಐಎಸ್’ಎಲ್ ಎಂಪಿಎಂ ಎರಡು ಕಣ್ಣುಗಳಂತಿವೆ
ವಿಐಎಸ್ಎಲ್ ಜಿಲ್ಲೆಗೆ ಒಂದು ಕಿರೀಟದ ರೀತಿ ಇತ್ತು. ಅದಕ್ಕೂ ಕೊನೆ ಮೊಳೆ ಹೊಡೆದಿದ್ದಾರೆ. ಇದಕ್ಕೆ ನೇರ ಕಾರಣ ಬಿಜೆಪಿ ನಾಯಕರು. ಕಾರ್ಖಾನೆ ಭೂಮಿ ಮಾರಾಟಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ವಿಐಎಸ್’ಎಲ್ ಮತ್ತು ಎಂಪಿಎಂ ಎರಡು ಕಣ್ಣುಗಳಂತೆ ಇವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಣಿಯನ್ನು ನೀಡಲಾಗಿತ್ತು.. ಅದರೇ, ಇವರು ಏನು ಮಾಡಲಿಲ್ಲ ಎಂದು ಕಿಡಿ ಕಾರಿದರು.
ಮಾ.4ರಿಂದ ಅಭಿಯಾನ ಆರಂಭ
ಕಾಂಗ್ರೆಸ್ ಪಕ್ಷದಿಂದ ಮನೆ ಮನೆಗೆ ಹೋಗಿ ಹೊಸ ಘೋಷಣೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಮಾರ್ಚ್ 4 ರಿಂದಲೇ ಈ ಅಭಿಯಾನ ಆರಂಭವಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ 2000 ರೂ., 10 ಕೆ.ಜಿ ಅಕ್ಕಿ ವಿತರಣೆ ಯೋಜನೆ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.