ಕಾರವಾರ: ಖಾಸಗಿ ಬಸ್ ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 49 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹೊನ್ನಾವರದ ಸುಳೆಮುರ್ಕಿ ಬಳಿ ನಡೆದಿದೆ. ಸಾವನ್ನಪ್ಪಿದವರನ್ನು ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಎಂದು ಗುರುತಿಸಲಾಗಿದೆ. ಗೌರಿಬಿದನೂರಿನ ರಜನಿ (30) ಎಂಬವರು ಒಂದು ಕೈ ಕಳೆದುಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೇ ಘಟನೆಯಲ್ಲಿ 49 ಜನ ಗಾಯಗೊಂಡಿದ್ದು ಅವರನ್ನು ಉಡುಪಿ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಹಾಗೂ ಹೊನ್ನಾವರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಸ್ ನಲ್ಲಿ ಸುಮಾರು 53 ಜನ ಪ್ರಯಾಣಿಕರು ಗೌರಿಬಿದನೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.