ಈ ದೇಶದಲ್ಲಿ ಹಣ ವಂಚಿಸಿದವರ ಮತ್ತು ಹಣ ಪಾವತಿಯನ್ನು ಬಾಕಿ ಉಳಿಸಿಕೊಂಡ ಸುಸ್ತಿದಾರರ ಹಣ ವರ್ಗಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತದ ಸಾಮಾನ್ಯ ಜನರ ಹಣ ಬಳಸಿದೆ ಎಂದು ಜಾಲತಾಣದ ಮಾಧ್ಯಮವೊಂದರ ವರದಿ ಆರೋಪಿಸಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 1 ರಂದು ಬ್ಯಾಂಕುಗಳ ನಷ್ಟದ ಬಗ್ಗೆ ಸಂಸತ್ತಿನಲ್ಲಿ ನೀಡಿದ ಉತ್ತರ ಹಲವು ಅನುಮಾನ ಮೂಡಿಸಿದೆ. ಬ್ಯಾಂಕುಗಳ ನಷ್ಟದ ಅಂಕಿ ಅಂಶಗಳ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.
ದಿ ವೈರ್ ಸುದ್ದಿಜಾಲತಾಣವು 20 ತಿಂಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವ್ಯವಹಾರ ಮತ್ತು ಬ್ಯಾಂಕ್ ವಹಿವಾಟುಗಳ ವಿವರ ಅಧ್ಯಯನ ನಡೆಸಿ ಪ್ರಕಟಿಸಿದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಜೂನ್ 18 ರಂದು ದಿ ವೈರ್‌ನಲ್ಲಿ “ಭಾರತದ ಐತಿಹಾಸಿಕ ಬ್ಯಾಂಕ್ 12 ಲಕ್ಷ ಕೋಟಿ ನಷ್ಟಕ್ಕೆ ಪ್ರಧಾನಿ ಮೋದಿ ಸರ್ಕಾರ ಉತ್ತರಿಸಬೇಕು” ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಲ್ಲಿ ಈ ಮಾಹಿತಿ ಪ್ರಸ್ತುತಪಡಿಸಲಾಗಿದೆ.
“ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಮೊದಲ ಎಂಟು ವರ್ಷಗಳು, ಒಂಬತ್ತು ತಿಂಗಳುಗಳನ್ನು ಅಧ್ಯಯನ ಮಾಡಲಾಗಿದೆ. ಒಂಬತ್ತು ವರ್ಷಗಳ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂಕಿ ಅಂಶವನ್ನು ಹೊಂದಿದ್ದೇವೆ. ಎಲ್ಲಾ ಬ್ಯಾಂಕ್‌ಗಳು ಕಳೆದುಕೊಂಡಿರುವ ಮೊತ್ತವು 12,09,606 ಕೋಟಿ ರೂ.ಗಳಿಂದ 12,50,553 ಕೋಟಿ ರೂ. ಆಗಿದೆ
ಭಾರತದ ಇತಿಹಾಸದಲ್ಲಿ ಹಿಂದೆಂದೂ ಒಂದು ಹಗರಣ ಅಥವಾ ಅದರ ಪರಿಣಾಮದ ಯಾವುದೇ ಸಾರ್ವಜನಿಕ ಚರ್ಚೆಯಿಲ್ಲದೆ ಬ್ಯಾಂಕುಗಳು ವರ್ಷದಿಂದ ವರ್ಷಕ್ಕೆ ಇಷ್ಟು ದೈತ್ಯಾಕಾರದ ಮೊತ್ತವನ್ನು ಕಳೆದುಕೊಂಡು ನಾಶವಾಗದೆ ಉಳಿದಿವೆ” ಎಂದು ವರದಿ ಹೇಳಲಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಹಾನಿಗೊಳಗಾಗಿವೆ. ಆದರೆ ಖಾಸಗಿ ಬ್ಯಾಂಕುಗಳು ಸಹ ಈ ವೈರಸ್‌ನಿಂದ ಮುಕ್ತವಾಗಿಲ್ಲ. ಈ ಬ್ಯಾಂಕುಗಳಲ್ಲಿನ ಸಾರ್ವಜನಿಕ ಠೇವಣಿಗಳನ್ನು ರಾಜಕೀಯ ಬೆಂಬಲಿತ ವಂಚಕರ ಖಾತೆಗೆ ಹಣ ವರ್ಗಾಯಿಸಲು ಬಳಸಲಾಗಿದೆ ಎಂದು ನವೀಕೃತ ದತ್ತಾಂಶಗಳು ತಿಳಿಸುತ್ತವೆ ಎಂದು ವರದಿ ಮಾಹಿತಿ ನೀಡಿದೆ.
ನರೇಂದ್ರ ಮೋದಿ ಅವರೊಂದಿಗೆ ಪ್ರವರ್ಧಮಾನಕ್ಕೆ ಬಂದ ಅನೇಕರು ಬ್ಯಾಂಕ್ ನಿಧಿಗಳಿಂದ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡಿದ್ದಾರೆ. ಈ ಹಣವನ್ನು ವಿದೇಶದಲ್ಲಿ ಸುಂದರವಾದ ಮಹಲುಗಳು, ಐಷಾರಾಮಿ ಜೀವನಕ್ಕಾಗಿ ವಂಚಕರು ಬಳಕೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಧಾನಿ ಮೋದಿ ಸರ್ಕಾರದಿಂದ ಯಾರೊಬ್ಬರೂ ವಿಚಾರಣೆ ಮತ್ತು ಜೈಲು ಶಿಕ್ಷೆಗೆ ಒಳಗಾಗಿಲ್ಲ. ಆದರೆ ಮನಮೋಹನ್ ಸಿಂಗ್ ಸರ್ಕಾರವು ತಮ್ಮ ಆಡಳಿತದಲ್ಲಿನ ರಾಮಲಿಂಗಂ ರಾಜು ಅವರನ್ನು ಸತ್ಯಂ ಪ್ರಕರಣದಲ್ಲಿ ಜೈಲಿಗೆ ಕಳುಹಿಸಿತ್ತು. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಮಾಡಿದ ನಂತರ ಈ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿತ್ತು.
“ಬ್ಯಾಂಕುಗಳಿಗೆ ವಂಚಿಸಿದ ಮೊತ್ತವನ್ನು ವಸೂಲಿ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಗ್ರ ಇಪ್ಪತ್ತು ವಂಚಕರಲ್ಲಿ ಪ್ರತಿಯೊಬ್ಬರಿಗೂ ಶಿಕ್ಷೆಯನ್ನು ನೀಡಲಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ “ವಂಚನೆ ಪತ್ತೆಯಾದ ತಕ್ಷಣ ಬ್ಯಾಂಕ್‌ಗಳು ದೂರುಗಳನ್ನು ಸಲ್ಲಿಸುವ ಅಗತ್ಯವಿದೆ” ಎಂದು ಸೀತಾರಾಮನ್ ಉತ್ತರಿಸಿದ್ದಾರೆ.
ಆದರೆ ನಿರ್ಮಲಾ ಸೀತಾರಾಮನ್ ಅವರು ಹೆಸರಿಸಿದ 20 ವಂಚಕರಲ್ಲಿ ಅನೇಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದಾರೆ ಎಂದು ವರದಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಜಮ್ಮು ಮತ್ತು ಕಾಶ್ಮೀರ | ಉಗ್ರರೊಂದಿಗೆ ಗುಂಡಿನ ಚಕಮಕಿ; ಮೂವರು ಸೇನಾ ಯೋಧರು ಹುತಾತ್ಮ
ಸಂಸತ್ತಿನಲ್ಲಿ ಬ್ಯಾಂಕುಗಳಿಗೆ ವಂಚಿಸಿದವರ ಕುರಿತ ಪ್ರಶ್ನೆಯಿಂದ ನಿರ್ಮಲಾ ಸೀತಾರಾಮನ್ ಅವರು ನುಣುಚಿಕೊಂಡರು. ಆದರೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, “ಸರಕಾರವು ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯಿದೆಯಡಿ ಆರೋಪಿಗಳಿಂದ 15,113 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ” ಎಂದು ಉತ್ತರಿಸಿದರು.
ಈ ವರ್ಷದ ಫೆಬ್ರುವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಹಣಕಾಸು ಖಾತೆಯ ಮತ್ತೊಬ್ಬ ರಾಜ್ಯ ಸಚಿವ ಭಾಗವತ್ ಕರಾದ್, “ದೊಡ್ಡ ಸಾಲಗಳ ಮೇಲಿನ ಮಾಹಿತಿಯ ಕೇಂದ್ರ ಭಂಡಾರ (ಸಿಆರ್‌ಎಲ್‌ಎಲ್‌ಸಿ) ದತ್ತಾಂಶ ವರದಿ ಮಾಡಿದಂತೆ ವಾಣಿಜ್ಯ ಬ್ಯಾಂಕ್‌ಗಳಿಂದ ಅಗ್ರ 10 ಸಾಲಗಾರರಿಗೆ ಒಟ್ಟು 12,71,604 ಕೋಟಿ ರೂ. ನೀಡಲಾಗಿದೆ . ಆದ್ದರಿಂದ ಅಗ್ರ 10 ಸಾಲಗಾರರಿಗೆ ಬ್ಯಾಂಕ್‌ಗಳು ಎಷ್ಟು ಸಾಲ ನೀಡಿವೆ ಎಂಬ ಕಲ್ಪನೆಯನ್ನು ನಾವು ಹೊಂದಿದ್ದೇವೆ. ಅಗ್ರ 100 ಮಂದಿ ಈ ಮೊತ್ತವನ್ನು ಐದರಿಂದ ಆರು ಪಟ್ಟು ಹೆಚ್ಚು ಪಡೆದಿರಬಹುದು ಎಂದು ಅಂದಾಜು ಮಾಡುತ್ತೇವೆ” ಎಂದು ಹೇಳಿದ್ದರು. ಆದರೆ ಈ ಮೊತ್ತ ಬ್ಯಾಂಕುಗಳಿಗೆ ಹಿಂತಿರುಗುವ ಸಾಧ್ಯತೆ ಇಲ್ಲ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ ಎಂದು ವರದಿ ಹೇಳಿದೆ.