ಇಂದಿನಿಂದ ಪುಟಾಣಿಗಳ ಶಾಲೆ ಶುರುವಾಗಲಿದೆ. ಹಲವು ದಿನಗಳಿಂದ ಮನೆಯಲ್ಲೇ ಪಾಠ ಕಲಿಯುತ್ತಿದ್ದ ಚಿಣ್ಣರು, ಶುಭ ಸೋಮವಾರದಂದು ಶಾಲೆಗೆ ಹಾಜರಾಗಲಿದ್ದಾರೆ. ಹೌದು, ಕೊರೋನಾದಿಂದ ಬಂದ್ ಆಗಿದ್ದ ಪ್ರಾಥಮಿಕ ಶಾಲೆಗಳು ಇಂದಿನಿಂದ ಓಪನ್ ಆಗ್ತಿದೆ. ಈಗಾಗಲೇ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ. ಇದರ ಮಧ್ಯೆ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಶುರುವಾಗಿದೆ.
20 ತಿಂಗಳ ಬಳಿಕ ಪ್ರಾಥಮಿಕ ಶಾಲೆ ಓಪನ್.. ಮಧ್ಯಾಹ್ನದ ವರೆಗೆ ಕ್ಲಾಸ್!
ಕಳೆದ 20 ತಿಂಗಳಿಂದ ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿದೆ. ಮಕ್ಕಳ ಕಲರವವಿಲ್ಲದೆ ಶಾಲೆಗಳು ಬಿಕೋ ಎನ್ನುತ್ತಿವೆ. ಶಿಕ್ಷಕರ ಗಂಭೀರ ಸ್ವರವಿಲ್ಲದೆ ಸ್ತಬ್ಧವಾಗಿರೊ ತರಗತಿಗಳು. ಈ ನಿಶ್ಯಬ್ಧ ವಾತಾವರಣ ಸಾಕು, ಇನ್ನಷ್ಟು ದಿನ ಮಕ್ಕಳು ಮನೆಯಲ್ಲಿರೋದು ಸರಿಯಲ್ಲ. ಆದಷ್ಟು ಬೇಗ ಮಕ್ಕಳನ್ನ ಶಾಲೆಗೆ ವಾಪಸ್ ಕರೆಕೊಳ್ಳಬೇಕು. ಆನ್ ಲೈನ್ ತರಗತಿ ನಿಲ್ಲಿಸಿ, ಬೌತಿಕ ತರಗತಿಗಳನ್ನ ಶುರು ಮಾಡ್ಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಇಂದಿನಿಂದ 1 ರಿಂದ 5 ತರಗತಿವೆರೆಗೆ ಶಾಲೆ ಆರಂಭವಾಗುತ್ತಿದೆ.
ಕೊರೋನಾ ಕಡಿಮೆಯಾದ ಹಿನ್ನೆಲೆ ದಸರಾ ಬಳಿಕ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತೆ ಎಂದು ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಅಂತೆಯೇ ಕೆಲ ದಿನಗಳ ಹಿಂದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರಿಕಾಗೋಷ್ಠಿ ನಡೆಸಿ 25ರಂದು ಶಾಲೆ ಆರಂಭ ಎಂದು ಶುಭ ಸುದ್ದಿ ನೀಡಿದರು. ಕಳೆದ 20 ತಿಂಗಳಿನಿಂದ ಶಾಲೆ ಮುಖ ನೋಡದ ಮಕ್ಕಳು ಇದೀಗ ಇಂದಿನಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ ಆರಂಭದಲ್ಲೇ ಮಕ್ಕಳಿಗೆ ಪೂರ್ಣಾವಧಿ ತರಗತಿಗಳು ಇರುವುದಿಲ್ಲ. ಈಗಾಗಲೇ ಕೊರೋನಾ ಹಾಗೂ ಇನ್ನಿತರ ವಿಚಾರಗಳಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಏಕಾಏಕಿಯಾಗಿ ಪೂರ್ಣಾವಧಿ ತರಗತಿಗಳು ಮಾಡದೆ ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್ ನಡೆಸಲು ಇಲಾಖೆ ಮುಂದಾಗಿದೆ.
ಶಾಲೆ ಶುರುವಾದ ಬೆನ್ನಲ್ಲೇ ಶಿಕ್ಷಣ ಇಲಾಖೆಗೆ ಮತ್ತೊಂದು ತಲೆನೋವು!
ಇನ್ನೂ ಶಾಲೆ ಪ್ರಾರಂಭವಾಗುತ್ತಿದ್ದಂತೆ ಇತ್ತ ಸರ್ಕಾರಿ ಶಾಲಾ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು 1 ಲಕ್ಷ 63 ಸಾವಿರ ಶಿಕ್ಷಕರು ಇದ್ದಾರೆ. ಇವರೆಲ್ಲಾ ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳೇನು!
– ಪದವೀಧರ ಶಿಕ್ಷಕರ ಸಮಸ್ಯೆ ಸರ್ಕಾರ ಆಲಿಸಬೇಕು
– ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು
– ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಭಾರಿ ವರ್ಗಾವಣೆ ಮಾಡಬೇಕು
– ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕು
– ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು
– ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಆಲಿಸಿ, ಪರಿಹರಿಸಬೇಕು
– ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು
ಅಂತೂ ಇಂತು ರಾಜ್ಯದಲ್ಲೆ ಸಂಪೂರ್ಣವಾಗಿ ಶಾಲೆ ಆರಂಭವಾಗ್ತಿದೆ. ಶೈಕ್ಷಣಿಕವಾಗಿ ಕಲಿಯದಿದ್ದರೆ ಮಕ್ಕಳ ಭವಿಷ್ಯಕ್ಕೆ ತೊಂದರೆ ಎನ್ನುವುದು ತಿಳಿದಿರುವ ವಿಚಾರ. ಕೊರೊನಾದ ನಡುವೆಯು ಇಂತ ದಿಟ್ಟ ನಿರ್ಧಾರ ತೆಗೆದ್ಕೊಂಡಿರುವ ಸರ್ಕಾರದ ನಡೆ ಶ್ಲಾಘನೀಯ. ಆದರೆ ಶಾಲೆ ಶುರುವಾದ ಬೆನ್ನಲ್ಲೇ ಸರ್ಕಾರಿ ಶಾಲಾ ಶಿಕ್ಷಕರು ಪ್ರತಿಭಟನೆಗೆ ಇಳಿದಿರುವುದು ಶಿಕ್ಷಣ ಇಲಾಖೆಗೆ ಹಾಗೂ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿದೆ. ಒಟ್ನಲ್ಲಿ ಮಕ್ಕಳ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮ ಬೀರದಂತೆ ಶಾಲೆಗಳು ನಡೆಯಲಿ ಅನ್ನೋದು ನಮ್ಮ ಆಶಯ.