ಬೆಂಗಳೂರು: ಡಿಜಿಟಲ್ ಪತ್ರಿಕೋದ್ಯಮದ ಆರಂಭದಿಂದಲೂ ಅದರೊಂದಿಗೆ ಕೆಲಸ ಮಾಡುತ್ತಾ ಹಲವು ಪ್ರಯೋಗ ನಡೆಸಿ ಸದ್ಯ ‘ದಿ ಹಿಂದೂ’ ಪತ್ರಿಕೆಯ ಡಿಜಿಟಲ್ ಎಡಿಟರ್ ಆಗಿರುವ ಸುಭಾಷ್ ಕೆವಿನ್ ರೈ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದೇ ರೀತಿ ಪತ್ರಿಕೆ, ಡಿಜಿಟಲ್ ಮತ್ತು ಮನರಂಜನಾ ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಪ್ರಸ್ತುತ ಜಿಯೋ ಸಿನಿಮಾ ಓಟಿಟಿ ವೇದಿಕೆಯ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಎನ್ ಎ ಮಹಮ್ಮದ್ ಇಸ್ಮಾಯಿಲ್ ವಾರ್ಷಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಸುಭಾಷ್ ಕೆವಿನ್ ರೈ ಪರಿಚಯ
1993ರಲ್ಲಿ ದುಬೈನಲ್ಲಿ BBS ಡಿಜಿಟಲ್ ಮಾಧ್ಯಮದ ಮೂಲಕ ಪತ್ರಿಕೋದ್ಯಮ ಆರಂಭಿಸಿದ ಸುಭಾಷ್ ಕೆವಿನ್ ರೈ ನಂತರ ಅಮೆರಿಕಾದ ಪತ್ರಿಕೋದ್ಯಮ ಶಿಕ್ಷಕರ ಗುಂಪಿನ ಜರ್ನೆಟ್ ನ್ಯೂಸ್‌ಗ್ರೂಪ್ ಮೂಲಕ ಡಿಜಿಟಲ್ ಪತ್ರಿಕೋದ್ಯಮದ ಹಲವು ಆಯಾಮಗಳನ್ನು ಕರಗತ ಮಾಡಿಕೊಂಡರು. 25 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಸುಭಾಷ್ ಕೆವಿನ್ ರೈ ಬಲವಾದ ಪತ್ರಿಕೋದ್ಯಮದ ಮೌಲ್ಯಗಳು, ರಾಜಕೀಯ ಮತ್ತು ಪ್ರಚಲಿತ ವಿದ್ಯಮಾನಗಳ ಆಳವಾದ ತಿಳುವಳಿಕೆ, ತಾಂತ್ರಿಕ ಪರಿಣತಿಗಳನ್ನು ಹೊಂದಿದ್ದಾರೆ.

ಬೆಂಗಳೂರಿನಲ್ಲಿರುವ ಎಕನಾಮಿಕ್ ಟೈಮ್ಸ್ ಆನ್‌ಲೈನ್‌ನೊಂದಿಗೆ ಪ್ರಾರಂಭಿಸಿ, indya.com, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಮತ್ತು ನ್ಯೂ ಮೀಡಿಯಾದ ಸ್ಥಾಪಕ ಅಧ್ಯಾಪಕ ಸದಸ್ಯ, ಎಕನಾಮಿಕ್ & ಪೊಲಿಟಿಕಲ್ ವೀಕ್ಲಿ ಸೇರಿದಂತೆ ವಿವಿಧ ಸಂಸ್ಥೆಗಳ ವೆಬ್ ಮತ್ತು ಇಂಟರ್ನೆಟ್ ಸಂಪಾದಕರಾಗಿದ್ದರು.

ದೆಹಲಿಯಲ್ಲಿ ದಿ ಹಿಂದೂಸ್ತಾನ್ ಟೈಮ್ಸ್ ಡಿಜಿಟಲ್ ಆವೃತ್ತಿಯ ಸಂಪಾದಕರಾಗಿ ಕೆಲಸ ಮಾಡಿದ ಅವರು ಸದ್ಯ ‘ದಿ ಹಿಂದೂ’ ಪತ್ರಿಕೆಯ ಡಿಜಿಟಲ್ ಎಡಿಟರ್ ಆಗಿದ್ದಾರೆ.
ಸುಭಾಷ್ ರೈ ಅವರಲ್ಲದೆ 2024ನೇ ಸಾಲಿನ ವಿಶೇಷ ಪ್ರಶಸ್ತಿಗೆ ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ, ಜಿ.ಎಸ್. ಕೃಷ್ಣಮೂರ್ತಿ ಮತ್ತು ಡಾ. ನಾಗೇಶ್ ಬಸವರಾಜ್ ಭಾಜನರಾಗಿದ್ದಾರೆ.

ಎನ್ ಎ ಮಹಮ್ಮದ್ ಇಸ್ಮಾಯಿಲ್ ಪರಿಚಯ
ಮೂಲತಃ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ನಲ್ಲೂರಿನವರಾದ ಎನ್ ಎ ಮಹಮ್ಮದ್ ಇಸ್ಮಾಯಿಲ್ ಮಾಧ್ಯಮ ಕ್ಷೇತ್ರದಲ್ಲಿ ಎನ್.ಎ.ಎಂ. ಇಸ್ಮಾಯಿಲ್ ಎಂದೇ ಪರಿಚಿತರು. ಮಂಗಳೂರಿನ ‘ನೇತ್ರಾವತಿ ವಾರ್ತೆ’ ಸಂಜೆ ಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿಜೀವನ ಆರಂಭಿಸಿದ ಇವರು ಮಂಗಳೂರು ಮಿತ್ರ, ಕರಾವಳಿ ಅಲೆ, ಜನವಾಹಿನಿ, ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.
ಸುದ್ದಿ ಮನೆಯಲ್ಲಿ ಬಳಕೆಯಾಗುವ ತಂತ್ರಜ್ಞಾನವನ್ನು ಸಂಪಾದಕೀಯ ಸಿಬ್ಬಂದಿಯ ದೃಷ್ಟಿಕೋನದಲ್ಲಿ ಪುನರ್ ವಿನ್ಯಾಸಗೊಳಿಸುವ ಕ್ರಿಯೆಯಲ್ಲಿ ಇವರ ಪಾತ್ರ ಬಹುಮುಖ್ಯವಾದುದು. ಪ್ರಜಾವಾಣಿಯ ಸಹ ಸಂಪಾದಕನಾಗಿದ್ದಾಗ ಸಂಪಾದಕೀಯ ತಂತ್ರಜ್ಞಾನದ ಪುನರ್ ವಿನ್ಯಾಸದ ನೇತೃತ್ವ ವಹಿಸಿದ್ದರು. ಅಡೋಬಿ ಸಂಸ್ಥೆಯ ಪ್ರಕಟಣಾ ತಂತ್ರಾಂಶಗಳಲ್ಲಿ ಯೂನಿಕೋಡ್ ಕನ್ನಡವನ್ನು ಅಳವಡಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ರಾಜಕೀಯ, ವಾಣಿಜ್ಯ, ಸಾಹಿತ್ಯ, ಮನರಂಜನೆ, ಅನುವಾದದಿಂದ ತೊಡಗಿ ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳ ಬಗ್ಗೆ ಬಹಳ ವಿಸ್ತಾರವಾಗಿ ಬರೆದಿದ್ದಾರೆ. ಪ್ರಸ್ತುತ ಜಿಯೋ ಸಿನಿಮಾ ಓಟಿಟಿ ವೇದಿಕೆಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಎನ್ ಎ ಮಹಮ್ಮದ್ ಇಸ್ಮಾಯಿಲ್ ಅಲ್ಲದೆ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ 50 ಜನರಿಗೆ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಬೆಂಗಳೂರು ಪ್ರೆಸ್ ಕ್ಲಬ್ 2024ನೇ ‘ವರ್ಷದ ವ್ಯಕ್ತಿ’, ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ಗಳನ್ನು ಘೋಷಿಸಿದೆ. ಪ್ರತಿವರ್ಷ ಸಮಾಜದಲ್ಲಿ ಗುರುತರ ಕೆಲಸ ಮಾಡಿದವರಿಗೆ ಪ್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ನೀಡುತ್ತದೆ. 2024ನೇ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಆಯ್ಕೆಯಾಗಿದ್ದಾರೆ.

ಇದಲ್ಲದೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾದ ಜಾರಿಗೆ ತಂದಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಇಂಧನ ಸಚಿವ ಕೆ.ಜೆ. ಜಾರ್ಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ.





