ಶಿವಮೊಗ್ಗ ನಗರದ ಸರಿಸುಮಾರು ನಾಲ್ಕು ಲಕ್ಷ ಮಂದಿ, ತೀರ್ಥಹಳ್ಳಿಯ ಹದಿನೈದು ಸಾವಿರ ಮತ್ತು ಶೃಂಗೇರಿಯ ಐದು ಸಾವಿರ ಮಂದಿ ಸೇರಿ ತುಂಗಾ ನದಿಯನ್ನು ಹೇಗೆ ಹುರಿದು ಮುಕ್ಕುತ್ತಿದ್ದಾರೆ ಎಂಬ ಸುದ್ದಿ ಸರಣಿಯೊಂದನ್ನು ‘ವಿಜಯ ಕರ್ನಾಟಕ’ದ ಶಿವಮೊಗ್ಗ ವಿಭಾಗ ಜನರೆದುರು ತೆರೆದಿಡುವ ಪ್ರಯತ್ನದಲ್ಲಿದೆ.
‘ತುಂಗಾ ಉಳಿಸಿ’ ಎಂಬುದು ಈ ಅಭಿಯಾನದ ಹೆಸರು. ಇದುವರೆಗೆ ಪ್ರಕಟಗೊಂಡದ್ದು ಆರು ಸುದ್ದಿಬರಹ. ಅದರಲ್ಲಿ ಮೂರು ಸುದ್ದಿಗಳು ಶಿವಮೊಗ್ಗ ನಗರವನ್ನು ಕೇಂದ್ರವಾಗಿ ಇಟ್ಟುಕೊಂಡಿವೆ. ಮಿಕ್ಕ ಎರಡರಲ್ಲಿ ಒಂದು ಬರಹ ಶೃಂಗೇರಿಯಲ್ಲಿ ತುಂಗಾ ನದಿ ಹೇಗೆಲ್ಲ ಮಲಿನವಾಗುತ್ತಿದೆ ಎಂಬುದನ್ನು ವಿವರಿಸಿದರೆ, ಮತ್ತೊಂದು ಬರಹ ತೀರ್ಥಹಳ್ಳಿಯಲ್ಲಿ ನದಿ ಎದುರಿಸುತ್ತಿರುವ ಸವಾಲುಗಳತ್ತ ಗಮನ ಸೆಳೆಯುತ್ತದೆ. ಇನ್ನೊಂದು ಬರಹ, ‘ಪವಿತ್ರ’ ನದಿಯಾದ ತುಂಗೆಯನ್ನು ಉಳಿಸಬೇಕೆಂದು ನಾಲ್ವರು ಮಠಾಧೀಶರು ಕೊಟ್ಟಿರುವ ಹೇಳಿಕೆಗಳನ್ನು ಆಧರಿಸಿದ ವರದಿ.
ಶಿವಮೊಗ್ಗ ನಗರವನ್ನು ಕೇಂದ್ರವಾಗಿಸಿ ಬರೆದ ಮೂರು ಸುದ್ದಿಯಲ್ಲಿ ಮೊದಲನೆಯದು, ನದಿ ಏಕೆ ಮತ್ತು ಹೇಗೆ ಮಲಿನವಾಗುತ್ತಿದೆ ಎಂಬ ಮೇಲ್ನೋಟದ ಚಿತ್ರಣ ಕಟ್ಟಿಕೊಡುತ್ತದೆ. ಎರಡನೆಯದು, ತುಂಗಾ ನದಿಯ ನೀರು ಚರಂಡಿ ನೀರಿಗಿಂತಲೂ ಹೆಚ್ಚು ಕಲುಷಿತವಾಗಿರುವ ಕುರಿತ ವೈಜ್ಞಾನಿಕ ಸಂಗತಿಗಳತ್ತ ಗಮನ ಸೆಳೆಯುತ್ತದೆ. ಮೂರನೆಯ ಬರಹ, ಕೊಳಚೆ ನೀರು ಶುದ್ಧೀಕರಣ ಘಟಕಗಳು ಇದ್ದರೂ ಮಹಾನಗರ ಪಾಲಿಕೆ ಹೇಗೆ ಕಣ್ಮುಚ್ಚಿ ಕುಳಿತಿದೆ ಎಂಬತ್ತ ಫೋಕಸ್ ಮಾಡಿದೆ.
ಈ ಅಭಿಯಾನದಲ್ಲಿ ಇದುವರೆಗೂ ಪ್ರಕಟಗೊಂಡಿರುವ ಈ ಆರು ಬರಹಗಳನ್ನೂ ಒಟ್ಟಿಗಿಟ್ಟು ನೋಡಿದರೆ, ಕೆಲವು ಅಂಶಗಳು ಎದ್ದುಕಾಣುತ್ತವೆ. ನದಿಯೊಂದರ ನಿರ್ವಹಣೆ ಸುಮ್ಮನೆ ಆಗುವ ಕೆಲಸವಲ್ಲ. ಪಟ್ಟಣ ಪಂಚಾಯತ್ಗಳು, ನಗರಪಾಲಿಕೆಗಳದ್ದು ಮುಖ್ಯ ಪಾತ್ರ. ಇನ್ನು, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳದ್ದು ಖಡಕ್ ಮೇಷ್ಟ್ರ ಕೆಲಸ. ನದಿಯೊಂದು ಕಲುಷಿತವಾಗುತ್ತಿದೆ ಅಥವಾ ಕಲುಷಿತವಾಗಿದೆ ಎಂದರೆ, ಈ ಎಲ್ಲ ಸಂಸ್ಥೆಗಳ ಮಂದಿಯೂ ಸಮಾನ ಹೊಣೆಗಾರರು. ಆದರೆ, ನದಿಯನ್ನು ಕಾಪಾಡುವ, ಸುಸ್ಥಿತಿಯಲ್ಲಿಡುವ ಹೊಣೆ ಹೊತ್ತ ಈ ಸಂಸ್ಥೆಗಳ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಮಾತನಾಡಿಸಿ, ಅವರ ಹೊಣೆಯನ್ನು ನೆನಪಿಸುವ, ಹೊಣೆ ನುಣುಚಿಕೊಂಡ ಕಾರಣಕ್ಕೆ ಆಗಿರುವ ಎಡವಟ್ಟಿಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸುವ, ಮುಂದೆ ನದಿಯನ್ನು ಹೇಗೆ ಸುಸ್ಥಿತಿಗೆ ತರಲಿದ್ದಾರೆ ಎಂಬ ಆಲೋಚನೆಯನ್ನು ಹೆಕ್ಕುವ ಕೆಲಸವನ್ನು ಶಿವಮೊಗ್ಗದ ‘ವಿಜಯ ಕರ್ನಾಟಕ’ ಮಂದಿ ಇನ್ನೂ ಮಾಡಿಲ್ಲ.
ಕೊಳಚೆ ನೀರು ಶುದ್ಧೀಕರಣ ಘಟಕಗಳು ನನೆಗುದಿಗೆ ಬಿದ್ದಿರುವ ಸುದ್ದಿಯಲ್ಲಿ, ಶಿವಮೊಗ್ಗ ನಗರಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಮತ್ತು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಎಸ್ ರಮೇಶ್ ಎಂಬುವವರ ಹೆಸರುಗಳು ಮಾತ್ರ ಕಾಣಿಸಿಕೊಳ್ಳುತ್ತವೆ. ಇದರಲ್ಲಿ, ಎರಡೇ ಸಾಲು ಮಾತನಾಡುವ ಮೇಯರ್, ಕೊಳಚೆ ನೀರು ನದಿಯ ಪಾಲಾಗಲು ಜನರೇ ಕಾರಣ ಎಂದು ಆಣಿಮುತ್ತು ಉದುರಿಸಿ, ತಮ್ಮ ಹೊಣೆಗಾರಿಕೆಯಿಂದ ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಅದೇ ರೀತಿ, ಎಂಜಿನಿಯರ್ ರಮೇಶ್, ತ್ಯಾವರೆಚಟ್ನಹಳ್ಳಿ ಬಳಿ ನಿರ್ಮಾಣವಾಗಿರುವ ಕೊಳಚೆನೀರು ಸಂಸ್ಕರಣಾ ಘಟಕವನ್ನು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಗರಪಾಲಿಕೆಗೆ ಹಸ್ತಾಂತರಿಸಿ ಆರು ತಿಂಗಳಾಯಿತು ಎಂದು ಹೇಳುವಲ್ಲಿಗೆ ಕತೆ ಮುಗಿಯುತ್ತದೆ.
ಶೃಂಗೇರಿ ವ್ಯಾಪ್ತಿಯ ನದಿ ತಟದಲ್ಲಿನ ಧಾರ್ಮಿಕ ಕೇಂದ್ರಗಳಿಂದಾಗಿ ನದಿ ಮಲಿನವಾಗುತ್ತಿದೆ ಎಂಬುದು ಒಂದು ಸುದ್ದಿಯಲ್ಲುಂಟು. ಇದಕ್ಕಾಗಿ ಪತ್ರಿಕೆಯು ಸಮೀಕ್ಷೆ ನಡೆಸಿದೆ ಎಂಬ ಸಂಗತಿಯನ್ನೂ ಉಲ್ಲೇಖಿಸಲಾಗಿದೆ. ಆದರೆ, ಆ ಧಾರ್ಮಿಕ ಕೇಂದ್ರಗಳು ಯಾವುವು, ಯಾವ ಧಾರ್ಮಿಕ ಕೇಂದ್ರ ಮಾಲಿನ್ಯಕ್ಕೆ ಹೆಚ್ಚು ಕಾರಣವಾಗುತ್ತಿದೆ ಎಂಬ ಸ್ಪಷ್ಟ ಉಲ್ಲೇಖ ಅದರಲ್ಲಿಲ್ಲ. ಹೆಸರು ಹೇಳಲು ಭಯವೋ ಅಥವಾ ಹೆಸರು ಹೇಳಿದರೆ ದೇವರು ಮುನಿಸಿಕೊಳ್ಳುತ್ತಾನೆಂಬ ಭಕ್ತಿಯೋ ಅರ್ಥವಾಗಲಿಲ್ಲ! ಅಲ್ಲದೆ, ಆ ಧಾರ್ಮಿಕ ಕೇಂದ್ರಗಳ ಉಸ್ತುವಾರಿಗಳ ಅಭಿಪ್ರಾಯವಾಗಲೀ, ಶೃಂಗೇರಿ ಪಟ್ಟಣ ಪಂಚಾಯತ್ ಅಧಿಕಾರಿಗಳು, ರಾಜಕೀಯ ನಾಯಕರ ಹೇಳಿಕೆಗಳಾಗಲೀ ಸುದ್ದಿಯಲ್ಲಿ ಇಲ್ಲ.
ಜ.೨೯ರಂದು, ‘ತುಂಗಾ ನದಿ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ’ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ವರದಿ ಕೆಲವು ಕಾರಣಗಳಿಗಾಗಿ ರಸವತ್ತಾಗಿದೆ. ನದಿಗೆ ತ್ಯಾಜ್ಯ ಹಾಕುವುದನ್ನು ತಡೆಯಬೇಕು, ಕೊಳಚೆನೀರು ಬಿಡುವುದನ್ನು ನಿಲ್ಲಿಸಬೇಕು, ಮರಳು ಗಣಿಗಾರಿಕೆ ಸ್ಥಗಿತಗೊಳಿಸಬೇಕು, ಸಂಸ್ಕರಣಾ ಘಟಕಗಳನ್ನು ಸರಿಪಡಿಸಬೇಕು ಇತ್ಯಾದಿ ಐದು ಅಂಶಗಳನ್ನು ಹೇಳಲಾಗಿದೆ. ಉಳಿದಂತೆ, ಇಡೀ ವರದಿಯಲ್ಲಿರುವುದು ನಾಲ್ವರು ಸ್ವಾಮೀಜಿಗಳ ಮಾತು ಮಾತ್ರ. ಅವರೆಲ್ಲರದ್ದೂ ಒಂದೇ ಬಣ್ಣದಲ್ಲಿ ಅದ್ದಿದ ಮಾತು: ತುಂಗಾ ಪವಿತ್ರ, ಅದನ್ನು ಉಳಿಸಿಕೊಳ್ಳಬೇಕು ಇತ್ಯಾದಿ ಕಾಗೆ ಕತೆ. ಕೂಡಲಿ ಸ್ವಾಮೀಜಿ ಮಾತ್ರ, ಹೊಳೆಹೊನ್ನೂರು ಸುತ್ತಲಿನ ಹಳ್ಳಿಯ ಜನ ಇದೇ ನೀರನ್ನು ಕುಡಿಯುತ್ತಿರುವುದರಿಂದ ಆಗಬಹುದಾದ ದುಷ್ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಸ್ಯಾರಸ್ಯ ಎಂದರೆ, ತುಂಗಾ ನದಿಯ ಪಾತ್ರವನ್ನು ಒತ್ತುವರಿ ಮಾಡಿ ಮಠದ ಕಟ್ಟದ ಕಟ್ಟಿಕೊಂಡಿರುವ ಆರೋಪವಿರುವ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕೂಡ, ಅಭಿಯಾನಕ್ಕೆ ನಮ್ಮ ಬೆಂಬಲವಿದೆ ಎಂದಿರುವುದು! ಬೆಕ್ಕಿನ ಕಲ್ಮಠ ಹೇಗೆ ತುಂಗಾ ಪಾತ್ರದ ಭೂಮಿಯನ್ನು ಒತ್ತುವರಿ ಮಾಡಿದೆ, ಆ ಮೂಲಕ ಸುತ್ತಮುತ್ತಲ ಇತರ ಒತ್ತುವರಿದಾರರಲ್ಲಿ ಹೇಗೆ ಧೈರ್ಯ ತುಂಬಿದೆ ಎಂಬ ತನಿಖಾ ವರದಿ ಪ್ರಕಟಿಸುವ ದಿಟ್ಟ ಹೆಜ್ಜೆಯನ್ನು ಶಿವಮೊಗ್ಗದ ‘ವಿಜಯ ಕರ್ನಾಟಕ’ದ ಮಂದಿ ಇಡಬಲ್ಲರೇ? ಕಾದುನೋಡುವ.
ಇನ್ನು, ತೀರ್ಥಹಳ್ಳಿ ಕೇಂದ್ರೀಕರಿಸಿ ಪ್ರಕಟವಾಗಿರುವ ಸುದ್ದಿಯಲ್ಲಿ ವಿಶೇಷವಾಗಿ ಮೀನು ಹಿಡಿಯಲು ವಿಷಕಾರಿ ಪದಾರ್ಥಗಳ ಬಳಕೆ ಮತ್ತು ಅಕ್ರಮ ಮರಳು ಗಣಿಗಾರಿಕೆ ಪ್ರಸ್ತಾಪವಾಗುತ್ತದೆ. ಆದರೆ, ಅಪ್ಪಿತಪ್ಪಿಯೂ ಅದರಲ್ಲಿ ಯಾರ ಹೆಸರೂ ಉಲ್ಲೇಖ ಆಗುವುದಿಲ್ಲ! ಈ ಕೃತ್ಯ ಮಾಡುತ್ತಿರುವವರ ದೊಡ್ಡ ಮನುಷ್ಯರ ಹಿಂದೆ ಬಿದ್ದು, ಅವರ ಜನ್ಮ ಜಾಲಾಡುವಷ್ಟು ಧೈರ್ಯ ಇಲ್ಲದಿದ್ದರೂ ಅಡ್ಡಿಯಿಲ್ಲ; ಆದರೆ, ಕನಿಷ್ಠಪಕ್ಷ, ಈ ಕುರಿತು ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಹೇಳಿಕೆಗಳನ್ನು ಪಡೆಯುವ ದಿಟ್ಟತನವನ್ನೂ ಈ ಸುದ್ದಿ ಬರೆದವರು ಕಾಣಿಸಿಲ್ಲ.
ಯಾವುದೇ ಅಭಿಯಾನದ ವರದಿಗಳು ಮಾಡಬೇಕಾದ, ಮಾಡಬಹುದಾದ ಬಹಳ ಮುಖ್ಯ ಕೆಲಸವೆಂದರೆ, ಸಂಬಂಧಪಟ್ಟವರಿಂದ ಮುಲಾಜಿಲ್ಲದೆ ಹೇಳಿಕೆ ಪಡೆಯುವುದು, ಆ ಮೂಲಕ ಪರೋಕ್ಷವಾಗಿ, ಆ ದೊಡ್ಡ ತಲೆಗಳಿಗೆ ತಮ್ಮ ಜವಾಬ್ದಾರಿ ನೆನಪಿಸುವುದು. ಶೃಂಗೇರಿ, ತೀರ್ಥಹಳ್ಳಿಯ ವರದಿಗಳು ಪಕ್ಕಕ್ಕಿರಲಿ, ಶಿವಮೊಗ್ಗದ ವರದಿಗಳಲ್ಲೂ ಇಂಥ ದಿಟ್ಟ ಹೆಜ್ಜೆಗಳು ಕಾಣಿಸುವುದೇ ಇಲ್ಲ. ಇಡೀ ಶಿವಮೊಗ್ಗ ತನ್ನದೆಂಬ ಅಹಮ್ಮಿನಿಂದಲೇ ಯಾವಾಗಲೂ ಮಾತು ಶುರು ಮಾಡುವ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಹಾಲಿ ಸಚಿವ ಈಶ್ವರಪ್ಪ ಈ ಅಭಿಯಾನದ ಯಾವುದೇ ವರದಿಯಲ್ಲೂ ಅಪ್ಪಿತಪ್ಪಿಯೂ ಸುಳಿದಿಲ್ಲ. ಜೊತೆಗೆ, ಈಗಿರುವ ಸರ್ಕಾರಗಳಲ್ಲಿ ಭಾಗಿಯಾಗಿರುವ ಶಿವಮೊಗ್ಗ ಜಿಲ್ಲೆಯ ಶಾಸಕರುಗಳು, ಸಂಸತ್ ಸದಸ್ಯರ್ಯಾರ ಹೆಸರೂ ಸುದ್ದಿಗಳಲ್ಲಿ ಕಾಣಿಸಿಕೊಂಡಿಲ್ಲ. ಹಾಗೆಯೇ, ಎಲ್ಲವನ್ನೂ ಜನರ ಮೇಲೆ ಉರುಳಿಸಿ ಮಾತನಾಡಿರುವ ಉಡಾಫೆಯ ಮೇಯರ್ ಮತ್ತು ನಗರಪಾಲಿಕೆಯ ಇತರ ರಾಜಕೀಯ ನಾಯಕರನ್ನು ಹಿಡಿದು ಜಾಡಿಸಿಲ್ಲ. ನಗರಪಾಲಿಕೆಯ ಅಧಿಕಾರಿಗಳನ್ನು ಹಿಡಿದು ಮಂಡೆ ಬಿಸಿಯಾಗುವಂಥ ಯಾವುದೇ ಪ್ರಶ್ನೆ ಕೇಳಿಲ್ಲ.
ಇನ್ನು, ನದಿಯ ಹೆಸರಿನಲ್ಲಿ ಇದುವರೆಗೂ ಶಿವಮೊಗ್ಗ ನಗರಪಾಲಿಕೆ ಎಷ್ಟು ಹಣ ಖರ್ಚು ಮಾಡಿದೆ, ಯಾವುದಕ್ಕೆಲ್ಲ ಖರ್ಚು ಮಾಡಿದೆ, ಎಷ್ಟು ರೊಕ್ಕವನ್ನು ಯಾರೆಲ್ಲ ಕೊಳ್ಳೆ ಹೊಡೆದಿದ್ದಾರೆ ಎಂಬ ತನಿಖಾ ವರದಿ ಬಾಕಿ ಉಂಟು. ಇದನ್ನು ಮಾಡುವ ಮನಸ್ಸು ‘ವಿಜಯ ಕರ್ನಾಟಕ’ಕ್ಕೆ ಇದೆಯಾ ಗೊತ್ತಿಲ್ಲ. ಹಾಗೆಯೇ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ನದಿಯ ಪಾತ್ರ ಎಲ್ಲೆಲ್ಲಿ ಕುಗ್ಗಿದೆ, ನದಿ ಪಾತ್ರದ ಭೂಮಿಯನ್ನು ಯಾರೆಲ್ಲ ಕೈವಶ ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ, ನದಿಗೆ ನಿಜಕ್ಕೂ ಬಹುದೊಡ್ಡ ಅಪಾಯವಾಗಿರುವ ಕಲ್ಲು ಗಣಿಗಾರಿಕೆಯ ಮಾಲೀಕರುಗಳು ಯಾರ್ಯಾರು, ಆ ಮಾಲೀಕರೆಲ್ಲ ಶಿವಮೊಗ್ಗದ ಯಾವ್ಯಾವ ರಾಜಕಾರಣಿಗಳ ಚೇಲಾಗಳು, ಅವರಿಗೆಲ್ಲ ನದಿ ತೀರದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯೊಳಗೂ ನೆಲದಾಳದ ಗಣಿಗಾರಿಕೆಗೆ ಅನುಮತಿ ದೊರಕುತ್ತಲೇ ಬರುತ್ತಿರುವುದು ಹೇಗೆ… ಮುಂತಾದ ಆಂಗಲ್ನಲ್ಲಿ ಒಂದಷ್ಟು ತನಿಖಾ ವರದಿಗಳನ್ನೂ ಮಾಡಿದರೆ, ಇಂಥ ಅಭಿಯಾನಗಳು ನಿಜಕ್ಕೂ ಸಾರ್ಥಕ ಎನಿಸುತ್ತವೆ. ಹಾಗಾಗಿ, ಇಂಥ ಖಡಕ್ ವರದಿಗಳನ್ನೂ ಮಾಡುವ ಧೈರ್ಯವನ್ನು ‘ವಿಜಯ ಕರ್ನಾಟಕ’ದಂಥ ಪತ್ರಿಕೆಗಳು, ಆ ಪತ್ರಿಕೆಯಲ್ಲಿನ ಕಾಳಜಿಯುತ ಪತ್ರಕರ್ತರು ಕಾಣಿಸಬೇಕಿದೆ.
ಸ್ಮಾರ್ಟ್ ಸಿಟಿ… ನಗಬೇಡಿ ಪ್ಲೀಸ್, ಶಿವಮೊಗ್ಗ ಸ್ಮಾರ್ಟ್ ಸಿಟಿಯಂತೆ! ಇಂಥ ಸ್ಮಾರ್ಟ್ ಸಿಟಿಯಲ್ಲಿ ಹರಿಯುವ ನದಿಯೊಂದು ಹೇಗೆಲ್ಲ ತಿಣುಕಾಡುತ್ತಿದೆ ಅಂತ ಗೊತ್ತಾಗಬೇಕೆಂದರೆ, ದಯವಿಟ್ಟು ‘ವಿಜಯ ಕರ್ನಾಟಕ’ದ ‘ತುಂಗಾ ಉಳಿಸಿ’ ಅಭಿಯಾನ ವರದಿಗಳನ್ನು ಓದಬೇಕು. ಸಾಕಷ್ಟು ಕೊರತೆಗಳಿದ್ದರೂ ‘ವಿಜಯ ಕರ್ನಾಟಕ’ ಶಿವಮೊಗ್ಗ ವಿಭಾಗದ ಈ ಪ್ರಯತ್ನ ಇತರ ಮಾಧ್ಯಮಗಳಿಗೆ ಕಿಡಿ ತಾಗಿಸಲಿ. ಎಲ್ಲಕ್ಕಿಂತ ಮುಖ್ಯವಾಗಿ, ಇಂಥ ಅಭಿಯಾನಗಳಿಗೆ ತನಿಖಾ ವರದಿಗಾರಿಕೆಯ ಸ್ಪಷ್ಟ ರೂಪ ಸಿಗುವಂತಾಗಲಿ.